ಉಡುಪಿ, ಡಿ 03 (MSP): ಪಾಕಿಸ್ತಾನ, ಚೀನಾದಲ್ಲಿ ರಾಮಮಂದಿರ ನಿರ್ಮಿಸಿ ಎಂದು ನಾವು ಕೇಳುತ್ತಿಲ್ಲ. ರಾಮನ ರಾಜ್ಯದಲ್ಲಿ ರಾಮಮಂದಿರ ನಿರ್ಮಿಸಿ ಎಂಬುದಷ್ಟೆ ನಮ್ಮ ಬೇಡಿಕೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಒತ್ತಾಯಿಸಿದರು.
ವಿಶ್ವಹಿಂದೂ ಪರಿಷತ್ನಿಂದ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ರಾಮ ಮಂದಿರ ನಿರ್ಮಾಣದ ಸೈಕ್ಲೋನ್ ಎದ್ದಿದೆ. ದೇವರ ವಿರೋಧಿ ಪಕ್ಷವನ್ನು ನಿರ್ನಾಮ ಮಾಡುವ ಸೈಕ್ಲೋನ್ ಇದು. ರಾಮಮಂದಿರ ನಿರ್ಮಾಣವನ್ನು ಯಾರೂ ವಿರೋಧಿಸುವಂತಿಲ್ಲ. ಪಾಕಿಸ್ತಾನ ಅಥವಾ ಚೀನಾದಲ್ಲಿ ರಾಮ ಮಂದಿರ ಕಟ್ಡಿಕೊಡಿ ಎಂದು ಕೇಳುತ್ತಿಲ್ಲ. ನಮ್ಮ ದೇಶದಲ್ಲಿ ರಾಮಮಂದಿರ ಕೇಳ್ತಾ ಇದ್ದೇವೆ. ರಾಮಮಂದಿರ ಕಟ್ಟಿ ಎಂದು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಭು ಸಂಹಿತೆಯಲ್ಲಿ ಪ್ರಜೆಗಳ ಬೇಡಿಕೆಯನ್ನು ಈಡೇರಿಸಲೇಬೇಕು. ರಾಮಮಂದಿರ ನಿರ್ಮಾಣವಾಗಲೇಬೇಕು’ ಎಂದು ಪಲಿಮಾರು ಶ್ರೀಗಳು ಹೇಳಿದರು.
ರಾಮ ದೇವರಿಗೆ ತನ್ನ ಮಂದಿರ ಕಟ್ಟಿಸಿಕೊಳ್ಳೋದು ಕಷ್ಟವಲ್ಲ. ಶ್ರೀಕೃಷ್ಣನ ಸನ್ನಿಧಾನದಲ್ಲಿ ಅಖಂಡ ಭಜನೆ ನಡೆಯಬೇಕು. ಇದರ ಫಲಶ್ರುತಿಯಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಪರ್ಯಾಯ ಕುಳಿತ ಸಮಯದಲ್ಲಿ ಸಂಕಲ್ಪ ಮಾಡಲಾಗಿತ್ತು. ಸಂಕಲ್ಪ ನೆರವೇರುವ ಸಮಯ ಬಂದಿದೆ. ರಾಮಮಂದಿರಕ್ಕೆ ಎಲ್ಲರೂ ಕಟಿಬದ್ಧರಾಗೋಣ ಎಂದರು.ರಾಮಮಂದಿರಕ್ಕೆ ಯಾರ ವಿರೋಧವೂ ಇಲ್ಲ. ರಾಮ ಭಕ್ತರಿಗೆ ರಹೀಂ ಭಕ್ತರ ಸಹಕಾರವೂ ಇದೆ. ಹಿಂಸೆಯ ಹಾದಿ ಹಿಡಿಯದೆ ಪ್ರೀತಿಯಿಂದ ರಾಮಮಂದಿರ ಕಟ್ಟೋಣ ಎಂದು ಶ್ರೀಗಳು ಸಲಹೆ ನೀಡಿದರು.
ರಾಮಮಂದಿರ ಕಾನೂನುಬದ್ಧವಾಗಿ ನಿರ್ಮಾಣವಾಗಬೇಕಿತ್ತು. ಆದರೆ, ನ್ಯಾಯಾಲಯದಿಂದ ನ್ಯಾಯ ಸಿಗುತ್ತಿಲ್ಲ. ಈಗ ಸಂಸತ್ತಿನ ಮೂಲಕವೇ ರಾಮಮಂದಿರ ನಿರ್ಮಾಣ ಮಾಡುವುದು ಉಳಿದಿರುವ ದಾರಿ. ಪರ್ಯಾಯದ ಅವಧಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ನನ್ನ ಸ್ವಾರ್ಥ ಎಂದು ಪಲಿಮಾರು ಶ್ರೀಗಳು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, 'ನಾನು ಮೊದಲು ಶ್ರೀರಾಮ ಭಕ್ತೆ ನಂತರ ಸಂಸದೆ. ಜಾತ್ಯಾತೀತತೆಯ ಹೆಸರಲ್ಲಿ ಬಂದ ಸರ್ಕಾರಗಳು ರಾಮಮಂದಿರ ನಿರ್ಮಾಣ ಮಾಡಿಲ್ಲ. ಮೋದಿ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತಿದೆ. ಸುಪ್ರೀಂ ಕೋರ್ಟ್ ನಲ್ಲೂ ಪ್ರಯತ್ನ ಮಾಡಿದ್ದೇವೆ. ಕೇಂದ್ರ ಸರ್ಕಾರ ಸುಪ್ರೀಂ ಆದೇಶ ಕಾಯುತ್ತಿದೆ. ಸುಪ್ರಿಂ ಕೋರ್ಟ್ ನಲ್ಲಿ ಪ್ರಕರಣ ಮುಂದೂಡಲು ಕಪಿಲ್ ಸಿಬ್ಬಲ್ ಮಧ್ಯ ಪ್ರವೇಶಿಸಿದ್ದಾರೆ. 2019 ಚುನಾವಣೆ ನಂತ್ರ ಕೇಸು ತಗೊಳ್ಳಿ ಅನ್ನೋ ವಾದ ಮಂಡನೆ ಮಾಡಿದ್ದಾರೆ. ಅ.29 ಇದ್ದ ವಿಚಾರಣೆ ಜನವರಿ 29 ಮುಂದೂಡಲಾಗಿದೆ. ಸುಗ್ರೀವಾಜ್ಞೆ ಮೂಲಕ ರಾಮಮಂದಿರ ನಿರ್ಮಿಸಬೇಕು ಎನ್ನುವ ಮನವಿಯನ್ನು ಪ್ರಧಾನಿಗೆ ತಲುಪಿಸುತ್ತೇನೆ. ಮುಂದಿನ ಅಧಿವೇಶನದಲ್ಲಿ ನಿಮ್ಮೆಲ್ಲರ ಇಚ್ಚೆಯನ್ನು ಪ್ರಸ್ತಾಪಿಸುತ್ತೇನೆ ಎಂದು ಶೋಭಾ ಹೇಳಿದರು.