ಬಂಟ್ವಾಳ, ಜ. 1 (DaijiworldNews/SM): ಗ್ರಾಮೀಣ ಪ್ರದೇಶದ ಯುವಕರ ಸಂಘಟನೆ ಮೂಲಕ ಕೃಷಿಕರ ಶಿಸ್ತುಬದ್ಧ ಕಂಬಳ ಕ್ರೀಡೆ ನಡೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಕಕ್ಯಪದವು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚೆನ್ನಪ್ಪ ಸಾಲ್ಯಾನ್ ಹೇಳಿದ್ದಾರೆ.
ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ-ಬರ್ಕೆಜಾಲು ಎಂಬಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ಶನಿವಾರ ಆರಂಭಗೊಂಡ 9ನೇ ವರ್ಷದ 'ಸತ್ಯ-ಧರ್ಮ' ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಕ್ಯಪದವು ಶ್ರೀ ಪಂಚದುರ್ಗ ಪ್ರೌಢಶಾಲೆ ಸಂಚಾಲಕ ದಾಮೋದರ ನಾಯಕ್ ಉಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಬಳ ಕ್ಷೇತ್ರದಲ್ಲಿ ಕಕ್ಯಪದವು ಜನರ ಕೊಡುಗೆ ಮತ್ತು ಸಾಧನೆ ಮಹತ್ತರವಾಗಿದೆ ಎಂದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಉಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಮೈರಾ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಉದ್ಯಮಿ ನಟೇಶ್ ಪೂಜಾರಿ ಬೆಂಗಳೂರು, ಪ್ರಗತಿಪರ ಕೃಷಿಕ ಸುಧಾಕರ ಶೆಟ್ಟಿ ಶಂಕರಬೆಟ್ಟು ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಸದಸ್ಯ ಚೇತನ್ ಉರ್ದೊಟ್ಟು,, ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ ಪ್ರಮುಖರಾದ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ತುಷಾರ್ ಭಂಡಾರಿ ಪುಣ್ಕೆದಡಿ, ಉಪಾಧ್ಯಕ್ಷ ಸಾಂತಪ್ಪ ಪೂಜಾರಿ ಹಟ್ಟದಡ್ಕ, ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಧ್ಯಕ್ಷ ಮಹೇಂದ್ರ ಕಾಯರ್ ಗುರಿ, ಕೋಶಾಧಿಕಾರಿ ಉಮೇಶ್ ಪೂಜಾರಿ ಮತ್ತಿತರರು ಇದ್ದರು.