ಕಾರ್ಕಳ, ಜ.01 (DaijiworldNews/PY): ಮೆಸ್ಕಾಂ ಕೆಲವು ವರ್ಷಗಳಿಂದ ಲಾಭದಾಯಕವಾಗಿ ನಡೆಯುತ್ತಿದ್ದರೂ, ತನ್ನ ಆಡಳಿತ ವ್ಯವಸ್ಥೆ ಮತ್ತು ವಿತರಣಾ ವ್ಯವಸ್ಥೆಗಳಲ್ಲಿನ ಸೋರಿಕೆ, ಅವ್ಯವಹಾರಗಳನ್ನು ಸರಿಪಡಿಸದೇ ಸಂಸ್ಥೆಗೆ ಆಗುವ ನಷ್ಟವನ್ನು ನೇರವಾಗಿ ಪ್ರತೀ ವರ್ಷವೂ ಬೆಲೆ ಏರಿಕೆ ಮೂಲಕ ಗ್ರಾಹಕರನ್ನು ಶೋಷಣೆ ಮಾಡುತ್ತಿದೆ. ಈ ಬಾರಿ ಮತ್ತೆ ಪ್ರತೀ ಯೂನಿಟ್ಗೆ ರೂ. 1.31ರಷ್ಟು ಬೆಲೆ ಏರಿಕೆ ಪ್ರಸ್ತಾವನೆಯನ್ನು ಆಯೋಗ ಮುಂದಿಟ್ಟಿರುವುದು ಅಕ್ಷೇಪಾರ್ಹವೆಂದು ಭಾರತೀಯ ಕಿಸಾನ್ ಸಂಘ ತೀರ್ಮಾನ ಕೈಗೊಂಡಿದೆ.
ಭಾರತೀಯ ಕಿಸಾನ್ ಸಂಘ ಕಾರ್ಕಳ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ಉಮಾನಾಥ ರಾನಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ್ದ ತಾಲೂಕು ಸಮಿತಿಯ ಮಾಸಿಕ ಸಭೆಯಲ್ಲಿ ಮೇಲಿನ ನಿರ್ಣಯವನ್ನು ಸವಾನುಮತದಿಂದ ಕೈಗೊಳ್ಳಲಾಯಿತು.
ಈ ಬಗ್ಗೆ ಗ್ರಾಹಕರನ್ನೆಲ್ಲಾ ಸಂಘಟಿಸಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಲು ತೀರ್ಮಾನಿಸಿದೆ. ಆಕ್ಷೇಪಣಾ ಅರ್ಜಿ ನಮೂನೆ ಭಾ.ಕಿ.ಸಂ ನ ಕಾರ್ಕಳ ಕಛೇರಿಯಲ್ಲಿ ಜನವರಿ 10 ರಿಂದ 20ರ ತನಕ ಲಭಿಸಲಿದ್ದು, ಅದನ್ನು ಭರ್ತಿ ಮಾಡಿ ಸಂಘದ ಕಛೇರಿಗೆ ತಲುಪಿಸಲು ಕೋರಲಾಯಿತು.
ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ್ ಮಾತನಾಡಿ, ಹವಾಮಾನ ಆಧಾರಿತ ಬೆಳೆವಿಮೆ ಬಗ್ಗೆ ಪ್ರಸ್ತಾವಿಸಿ ಕಳೆದ ಸಾಲಿನಲ್ಲಿ ಬೆಳೆವಿಮೆ ಮಾಡಿದ ಫಲಾನುಭವಿಗಳೆಲ್ಲರ ಬ್ಯಾಂಕ್ ಖಾತೆಗೆ ವಿಮಾ ಮೊತ್ತ ಜಮೆಯಾಗುತ್ತಿದೆ. ಕೆಲವು ಫಲಾನುಭವಿಗಳಿಗೆ ಅಸಮರ್ಪಕ ಕಾರಣ ನೀಡಿ ವಿಮಾ ಮೊತ್ತ ಮಂಜೂರು ಮಾಡದಿರುವ ದೂರುಗಳು ಕೂಡಾ ನಮಗೆ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ವಿಮಾ ಕಂಪೆನಿಗಳೊಂದಿಗೆ ಭಾ.ಕಿ.ಸಂ ಜಿಲ್ಲಾ ಸಮಿತಿ ಮೂಲಕ ಪರಿಶೀಲನೆ ನಡೆಸಿ ಆಗಿರುವ ತಪ್ಪನ್ನು ಸರಿಪಡಿಸಲು ಮುಂದಾಗುದೆಂದರು.
ಭಾ.ಕಿ.ಸಂ 2021-24ರ ಅವಧಿಯ ಸದಸ್ಯತ್ವ ಅಭಿಯಾನದ ಭಾಗವಾಗಿ ಗ್ರಾಮ ಸಮಿತಿಗಳನ್ನು ರಚಿಸಿ, ಸಮರ್ಪಕ ತಾಲೂಕು ಸಮಿತಿಯು ಕಾರ್ಯ ನಿರ್ವಹಿಸುಂತಾಗಲು ಅಧ್ಯಕ್ಷ ಉಮಾನಾಥ ರಾನಡೆ ತಿಳಿಸಿದರು.
ಗೋವಿಂದರಾಜ ಭಟ್ ಕಡ್ತಲ, ಸುಂದರ ಶೆಟ್ಟಿ ಮುನಿಯಾಲು, ಅನಂತ ಭಟ್ ಇರ್ವತ್ತೂರು, ಮೋಹನದಾಸ ಅಡ್ಯಂತಾಯ ಕಾಂತಾವರ, ಶೇಖರ ಶೆಟ್ಟಿ ನೀರೆ, ಮಹಾಬಲ ಸುವರ್ಣ ನಿಟ್ಟೆ, ಕೆ.ಪಿ.ಭಂಡಾರಿ ಕೆದಿಂಜೆ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ನಿರ್ವಹಿಸಿದರು.