ತುಮಕೂರು,ಡಿ 03, (MSP): ಗಣೇಶೋತ್ಸವದ ಸಂದರ್ಭ ಸಿಡಿಮದ್ದು ತಲೆ ಮೇಲೆ ಸಿಡಿದು ಯುವತಿಯೊಬ್ಬಳು ದಾರಣವಾಗಿ ಸಾವನಪ್ಪಿದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟ ಯುವತಿಯನ್ನು ತುರುವೇಕೆರೆ ತಾಲೂಕಿನ ಅಮ್ಮ ಸಂದ್ರದ ಹಡವನಹಳ್ಳಿ ಗ್ರಾಮದ ನಿವಾಸಿ ಸಿತಾರ (21) ಎಂದು ಗುರುತಿಸಲಾಗಿದೆ.
ತಿಪಟೂರಿನಲ್ಲಿ ಗಣೇಶ ಉತ್ಸವ ಪ್ರತಿ ವರ್ಷ ನಡೆಯುತ್ತದೆ. ಈ ವೇಳೆ ದೊಡ್ಡ ಪ್ರಮಾಣದ ಸಿಡಿಮದ್ದುಗಳನ್ನು ಸಿಡಿಸಲಾಗುತ್ತಿತ್ತು. ಭಾನುವಾರ ರಾತ್ರಿ ಗಣೇಶ ಉತ್ಸವವನ್ನು ನೋಡಲು ಸಿತಾರ ಅಲ್ಲಿಗೆ ತೆರಳಿದ್ದರು. ಈ ವೇಳೆ ಸಿತಾರ ತಲೆ ಮೇಲೆ ಸರಪಟಾಕಿ ಬಿದ್ದು ಸಿಡಿದಿದೆ.
ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ, ಮಾರ್ಗದ ಮಧ್ಯೆಯೇ ಸಿತಾರಾ ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.