ಕಾರ್ಕಳ, ಜ 01 (DaijiworldNews/MS): ಪವರ್ ಮಿನಿಸ್ಟರ್ ವಿ.ಸುನೀಲ್ ಕುಮಾರ್ ಅವರು ಪ್ರತಿನಿಧಿಸುವ ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಯಂತ್ರ ನಿಷ್ಕ್ರಿಯಗೊಂಡಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ನೇರ ಆರೋಪಗೈದಿದ್ದಾರೆ.
ಕಾರ್ಕಳ ನಗರದ ಹೋಟೆಲ್ ಪ್ರಕಾಶ್ನ ಸಭಾಂಗಣದಲ್ಲಿ ಕಾರ್ಕಳ ಬ್ಲಾಕ್ ಹಾಗೂ ಹೆಬ್ರಿ ಬ್ಲಾಕ್ ಕಮಿಟಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಬ್ರಿ ತಾಲೂಕು ರೂಪುಗೊಂಡು ವರ್ಷಗಳೇ ಕಳೆದಿದೆ. ತಾಲೂಕಿಗೆ ತಹಶೀಲ್ದಾರ್ ನೇಮಕ ಮಾಡುವಲ್ಲಿ ಸಚಿವ ಸುನೀಲ್ಕುಮಾರ್ ಅವರಿಗೆ ಸಾಧ್ಯವಾಗಿಲ್ಲ. ಹೆಬ್ರಿ ಹಾಗೂ ಕಾರ್ಕಳ ತಾಲೂಕಿಗೆ ಒಬ್ಬರೇ ತಹಶೀಲ್ದಾರ್ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಎದುರಾಗಿದೆ. ಹೆಬ್ರಿ ತಾಲೂಕು ರಚನೆಯ ರೂವಾರಿ ತಾನೆಂದು ಬೆನ್ನು ತಟ್ಟಿಕೊಳ್ಳುವ ಸಚಿವ ಸುನೀಲ್ ಕುಮಾರ್ ಅವರಿಗೆ ಸಮರ್ಪಕ ತಹಶೀಲ್ದಾರ್ ಅವರನ್ನು ನೇಮಕ ಮಾಡುವಲ್ಲಿ ಸಾಧ್ಯವಾಗಿಲ್ಲವೇಕೆ ಎಂದು ಪ್ರಶ್ನಿಸಿದರು. ಹಲವು ಇಲಾಖೆಗಳಲ್ಲಿ ಇನ್ನು ಸಿಬ್ಬಂದಿಗಳನ್ನು, ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ವಿಫಲಗೊಂಡಿದೆ. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗಳ ಸ್ಥಿತಿ ಶೋಚನೀಯವಾಗಿದೆ ಎಂದು ಆರೋಪಿಸಿದರು.
ಕೇಸು ಹಿಂಪಡೆಯಬೇಕು:
ಸಮಾಜದ ಕಟ್ಟಕಡೆಯ ನಾಗರಿಕರಿಗೆ ಆಶೋತ್ತರ ಈಡೇರಿಸುವಲ್ಲಿ ರಾಜ್ಯ ಸರಕಾರ ಸಾಧ್ಯವಾಗಿಲ್ಲ. ಈ ನಡುವೆ ಕೋಟದಲ್ಲಿ ದಲಿತರ ಮೇಲೆ ವಿನಾಕಾರಣ ಕೇಸು ದಾಖಲಿಸಿ ಅವರ ಜೀವದೊಂದಿಗೆ ಚೆಲ್ಲಾಟವಾಡುವ ಸರಕಾರದ ಕ್ರಮವನ್ನು ಇದೇ ಸಂದರ್ಭದಲ್ಲಿ ಖಂಡಿಸಿದ ಅವರು ದಲಿತ ಮೇಲಿನ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.ಕರೋನಾ, ಒಮಿಕ್ರಾನ್ ಎಂಬ ಗುಮ್ಮವನ್ನು ಮುಂದಿಟ್ಟು ಕರ್ಫ್ಯೂ ನಿರ್ಬಂಧ ವಿಧಿಸುತ್ತಿರುವುದು ತರವಲ್ಲ. ಉಡುಪಿಯಲ್ಲಿ ಅಂತಹ ಪ್ರಕರಣಗಳು ಹೆಚ್ಚಿರುವ ವರದಿ ಇಲ್ಲ. ಇದರಿಂದ ಜನಸಾಮಾನ್ಯರ ಜೀವನದ ಮೇಲೆ ಹೊಡೆತ ಬೀಳಲಿದೆ. ಇದರಿಂದ ನಿರುದ್ಯೋಗ ಸಮಸ್ಸೆ ಇನ್ನಷ್ಟು ಹೆಚ್ಚಲಿದೆ ಎಂದರು.
ತಾತ್ಕಾಲಿಕ ಹಕ್ಕುಪತ್ರ
ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಚಿವ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಅಂದಿನ ಕಂದಾಯ ಇಲಾಖಾಧಿಕಾರಿಗಳು ನಿವೇಶನ ರಹಿತರಿಗೆ ತಾತ್ಕಾಲಿಕ ಹಕ್ಕುಪತ್ರ ನೀಡಿ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ನಡೆಸಲಾಗಿದೆ. ತಾತ್ಕಾಲಿಕ ಹಕ್ಕು ಪತ್ರದಿಂದ ಸರಕಾರದ ಇತರ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿದೆ. ೯೪ಸಿ, ೯೪ಸಿಸಿ, ಹುಲಿಯೋಜನೆ, ಕಸ್ತೂರಿರಂಗನ್ ಯೋಜನೆಯ ಕುರಿತು ಸರಕಾರದ ಸ್ವಷ್ಟ ನಿರ್ಧಾರ ಇನ್ನೂ ಪ್ರಕಟಿಸುವಲ್ಲಿ ಸರಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಬಿಜಪಿ ಆ ಎಲ್ಲಾ ವಿವಾದಗಳನ್ನು ಅಂದು ಬ್ರಹ್ಮಾಸ್ತ್ರವಾಗಿ ಬಳಸಿಕೊಂಡಿದೆ ಎಂದು ವಿವರಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮುಖಂಡರಾದ ಪ್ರಭಾಕರ ಬಂಗೇರಾ, ದರ್ಶನ್ ಶೆಟ್ಟಿ, ಸುನೀಲ್ ಭಂಡಾರಿ, ಎನ್ಎಸ್ಯು ಜಿಲ್ಲಾ ಉಪಾಧ್ಯಕ್ಷ ರಕ್ಷಿತ್, ಕಾಂಗ್ರೆಸ್ ಐಟಿಸೆಲ್ನ ಸತೀಶ್ ಉಪಸ್ಥಿತರಿದ್ದರು.