ಮಂಗಳೂರು ಡಿ 03, (MSP): ಅತ್ಯಾಚಾರದಂತಹ ಹೀನ ಕೃತ್ಯದಲ್ಲಿ ಭಾಗಿಯಾಗುವ ಅಪ್ರಾಪ್ತ ವಯಸ್ಕರಿಗೂ ಕಠಿಣ ಶಿಕ್ಷೆಯಾಗಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಭಾನುವಾರದಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ತೋಟ ಬೆಂಗರೆಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅಪ್ರಾಪ್ತರಿದ್ದಾರೆ. ಅವರನ್ನು ಬಾಲಪರಾಧಿಗಳು ಎಂದು ಪರಿಗಣಿಸಬಾರದು. ಅವರಿಗೂ ಉಗ್ರಶಿಕ್ಷೆಯಾಗಬೇಕು. ಇಲ್ಲದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ’ ಎಂದರು. ಈ ಪ್ರಕರಣದಲ್ಲೂ ಬಂಧಿತ ಆರೋಪಿಗಳು ಮಾದಕದ್ರವ್ಯ ಸೇವನೆ ಮಾಡಿದ್ದರು ಎಂಬ ಮಾಹಿತಿ ಇದೆ. ಕರಾವಳಿಯಲ್ಲಿ ಮಾದಕ ವಸ್ತು ಮಾರಾಟ ಜಾಲವನ್ನು ನಿರ್ಮೂಲನೆ ಮಾಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಲಾಗುವುದು ಎಂದರು.
ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರ ತಡೆಗೆ ಎರಡು ಬಾರಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಆದರೂ, ಅತ್ಯಾಚಾರ ಪ್ರಕರಣಗಳ ಸಂಖ್ಯೆ ಕಡಿಮೆಯಾಗದಿರುವುದು ವಿಪರ್ಯಾಸ. ಮೈತ್ರಿ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅಪರಾಧಿಗಳನ್ನು ಶಿಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.