ಮಂಗಳೂರು, ಡಿ 02(SM): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಂಗಳೂರಿನಲ್ಲಿ ಹಾಡಹಗಲೇ ಅತ್ಯಾಚಾರ ನಡೆದಿರುವುದು ಆತಂಕಕಾರಿಯಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಕಠಿಣ ಕಾನೂನು ಕ್ರಮಗಳಿದ್ದರೂ ಈ ರೀತಿಯ ಘಟನೆಗಳು ನಡೆಯುತ್ತಿವೆ. ಗಾಂಜಾ ಮಾರಾಟಗಾರರ ಬಂಧನವಾಗುತ್ತದೆ ಆದರೆ, ಗಾಂಜಾ ಜಾಲವನ್ನು ಬೇರ್ಪಡಿಸಲು ಸಾಧ್ಯವಾಗಿಲ್ಲ. ಪೊಲೀಸ್ ಇಲಾಖೆ ಅಫೀಮಾ ಜಾಲ ಬಯಲಿಗೆ ತರಲು ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಹಂಪಿ ಉತ್ಸವ ಇಡೀ ರಾಜ್ಯದಲ್ಲಿ ನಡೆಯುವುದಿಲ್ಲ. ಹಂಪಿಯಲ್ಲಿ ಮಾತ್ರ ನಡೆಯುತ್ತದೆ. ಆದರೆ ಸರ್ಕಾರ ಬರಗಾಲದ ಕಾರಣ ನೀಡಿ ಉತ್ಸವವನ್ನ ರದ್ದು ಮಾಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಮಾಡೋದಕೆ ಸರ್ಕಾರದ ಬಳಿ ಹಣ ಇದೆ. ಹಂಪಿ ಉತ್ಸವ ಮಾಡೋದಕೆ ಸರಕಾರದ ಬಳಿ ಹಣವಿಲ್ಲ. ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ಮಾಡಲೇಬೇಕು ಎಂದರು.
ಇನ್ನು ಕನಸಲ್ಲಿ ಸಿಎಂ ಆಗೋದು ಸಿದ್ದರಾಮಯ್ಯ ಮಾತ್ರ. ಆದ್ರೆ ನನಸಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ. ಯಡಿಯೂರಪ್ಪ ಸಿಎಂ ಆಗಲಿ ಅನ್ನೋದು ರಾಜ್ಯದ ಜನ ಅಪೇಕ್ಷೆಯಾಗಿದೆ. ಮೈತ್ರಿ ಪಕ್ಷಗಳು ಕಿತ್ತಾಡೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದರು. ಸಿದ್ದರಾಮಯ್ಯ ಕಾಂಟ್ರವರ್ಸಿ ಕ್ರಿಯೆಟ್ ಮಾಡುತ್ತಿದ್ದಾರೆ. ಅದನ್ನ ಕುಮಾರಸ್ವಾಮಿ ಫಾಲೋ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇದೇ ವೇಳೆ ರಾಮಮಂದಿರ ನಿರ್ಮಾಣದ ಬಗ್ಗೆ ಜನಾರ್ದನ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಜನಾರ್ದನ ಪೂಜಾರಿ ಹೇಳಿಕೆ ಸ್ವಾಗತಾರ್ಹ. ಒಂದು ಕಾಲದಲ್ಲಿ ರಾಮಮಂದಿರ ಬಗ್ಗೆ ಪೂಜಾರಿ ಸಂಶಯ ವ್ಯಕ್ತಪಡಿಸಿದ್ದರು. ಈಗ ರಾಮಮಂದಿರದ ಬಗ್ಗೆ ಪೂಜಾರಿ ಹೇಳಿದ್ದಾರೆ. ಹಾಗಾದರೆ ಮಂದಿರ ನಿರ್ಮಾಣ ಆಗುತ್ತೆ. ಕಾಂಗ್ರೆಸ್ , ಕೋರ್ಟ್ ನಲ್ಲಿ ರಾಮ ಮಂದಿರ ವಿರುದ್ಧ ಹೋರಾಡುತ್ತಿದೆ. ಕಾಂಗ್ರೆಸ್ ಕೆಟ್ಟ ರಾಜ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ನಿಂದ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ ಎಂದರು.