ಮಂಗಳೂರು, ಡಿ.30 (DaijiworldNews/SM): ಹಿರಿಯ ಅಧಿಕಾರಿಗಳಾಗಲಿ, ಕಿರಿಯ ಅಧಿಕಾರಿಗಳಾಗಿರಲಿ ಜನಸಂಪರ್ಕದಲ್ಲಿರುವ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಡಿಮೆ ಕೆಲಸ ಕೊಟ್ಟಂತಾಗುತ್ತದೆ. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರವರ ಇಲಾಖೆಗಳಿಂದ ಅನುಷ್ಠಾನಗೊಳಿಸುವ ಕಲ್ಯಾಣ ಕಾರ್ಯಕ್ರಮಗಳನ್ನು ಜನರ ಬಳಿಗೆ ಹೋಗಿ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.
ಕೆಲವೊಂದು ಸಣ್ಣಪುಟ್ಟ ಕೆಲಸಗಳು ಗ್ರಾಮ ಲೆಕ್ಕಾಧಿಕಾರಿ, ಸಿಡಿಪಿಒ, ತಹಶೀಲ್ದಾರರು ಮಾಡಬಹುದು. ಆದರೆ ಅವುಗಳು ಜಿಲ್ಲಾಧಿಕಾರಿ ಕಚೇರಿ ಹಂತಕ್ಕೆ ಬರುತ್ತವೆ. ಮಾಹಿತಿ ಅರಿತಿರುವ ನಾಗರೀಕರು ಈ ದೇಶವನ್ನು ಕಟ್ಟಲು ಅಡಿಪಾಯವಿದ್ದಂತೆ. ತಾನು ತಿಳಿದ ಮಾಹಿತಿಯನ್ನು ಹತ್ತು ಜನಗಳಿಗೆ ತಿಳಿಸಿದರೆ ಅನುಕೂಲ. ಸಾಮಾಜಿಕ ಭದ್ರತೆ ಯೋಜನೆಯಡಿ ವಿಕಲಚೇತನರು ಹಾಗೂ ವೃದ್ಧರಿಗೆ ನಿವೃತ್ತಿ ವೇತನದ ಬಗೆಗಿನ ಮಾಹಿತಿಯನ್ನು ಅಧಿಕಾರಿಗಳೇ ಹೇಳಬೇಕಾಗಿಲ್ಲ. ಮಾಹಿತಿ ತಿಳಿದಿರುವ ಒಬ್ಬ ನಾಗರೀಕ ಹೇಳಿದರೆ ಸಾಕು ಎಂದರು.
ಸಮಾಜ ಸೇವೆ ಮಾಡಲು ದೇಶಕ್ಕಾಗಿ ಹೋರಾಡಲು ದೇಶದ ಗಡಿಗೆ ಹೋಗಬೇಕಾಗಿಲ್ಲ ನಮ್ಮ ನಮ್ಮ ಗ್ರಾಮಗಳು, ಅಕ್ಕಪಕ್ಕದ ಮನೆಗಳಿಗೆ ತಿಳಿಸಿದರೆ ಸಾಕು. ಸದೃಢ ಸಮಾಜ ದೇಶವನ್ನು ಕಟ್ಟಬಹುದು ಎಂದವರು ಸಲಹೆ ನೀಡಿದರು.