Karavali
ಮಂಗಳೂರು: ಕಾನೂನು ಸೇವಾ ಪ್ರಾಧಿಕಾರದ ಸದುಪಯೋಗಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಕರೆ
- Thu, Dec 30 2021 06:29:59 PM
-
ಮಂಗಳೂರು, ಡಿ.30 (DaijiworldNews/PY): "ಸಮಸ್ಯೆ ಅಥವಾ ದೌರ್ಜನ್ಯಗಳನ್ನು ಮೌನವಾಗಿಯೇ ಎದುರಿಸುವುದು ಯಾವುದೇ ಸಮಾಜದ ಒಳ್ಳೆಯ ಲಕ್ಷಣವಲ್ಲ, ಇಂತಹ ಸ್ಥಿತಿಗಳಲ್ಲಿ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರವಿದೆ" ಎಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಹೇಳಿದರು.
ಅವರು ಡಿ.30ರ ಗುರುವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡಬಿದ್ರಿ ವಕೀಲರ ಸಂಘ ಹಾಗೂ ಮೂಡಬಿದ್ರಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
"ಸಮಸ್ಯೆಗಳು ಅಥವಾ ದೌರ್ಜನ್ಯಗಳ ಇತ್ಯರ್ಥಕ್ಕಾಗಿ ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಬಾರದೇ ಅವುಗಳನ್ನು ಮೌನವಾಗಿಯೇ ಎದುರಿಸುವುದು ಕಠೋರ ಸ್ಥಿತಿ. ಅದು ಯಾವುದೇ ನಾಗರೀಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನೊಂದವರಿಗೆ, ತಮ್ಮ ಹಕ್ಕುಗಳಿಗಾಗಿ ಹೋರಾಡಲು ಶಕ್ತಿ ಇಲ್ಲದವರಿಗೆ ಕಾನೂನು ಸೇವಾ ಪ್ರಾಧಿಕಾರ ನೆರವಿಗೆ ನಿಂತು ಕಾನೂನಿನ ಅರಿವು ನೀಡುತ್ತದೆ, ಅದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಅವರು ಹೇಳಿದರು.
"ಇದೇ ಡಿ.18ರಂದು ರಾಜ್ಯಾದ್ಯಂತ ನಡೆದ ಮೆಗಾ ಲೋಕ್ ಅದಾಲತ್ನಲ್ಲಿ 3.36 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ. ಅದರ ಲಾಭವೆಂದರೆ ಅಲ್ಲಿ ಇತ್ಯರ್ಥವಾದ ಪ್ರಕರಣಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಅದೇ ಅಚಿತಿಮ. ಕಾನೂನು ಸೇವಾ ಪ್ರಾಧಿಕಾರಗಳ ಆಶ್ರಯದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ" ಎಂದರು.
"135 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ದಾಖಲಾಗುವ ಪ್ರಕರಣಗಳು ಕೂಡ ಹೆಚ್ಚು. ಅವುಗಳನ್ನು ಇತ್ಯರ್ಥ ಪಡಿಸಲು ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳು ಕೂಡ ಅಗತ್ಯವಿದೆ. ಆ ಸೌಕರ್ಯಗಳು ಹೆಚ್ಚಾಗಿ ಲಭಿಸಿದರೆ ಹೆಚ್ಚಿನ ಸಂಖ್ಯೆಯ ದಾವೆಗಳ ಇತ್ಯರ್ಥಕೂಡ ಆಗುತ್ತದೆ, ಹೆಚ್ಚು ಪ್ರಕರಣಗಳು ದಾಖಲಾಗುವುದರಿಂದ ಜನರಿಗೆ ತಮ್ಮ ಹಕ್ಕಿನ ಅರಿವಾಗಿದೆ ಎಂಬುದು ತಿಳಿಯುತ್ತದೆ, ಕ್ರಿಮಿನಲ್ಗಿಂತ ಸಿವಿಲ್ ಪ್ರಕರಣಗಳು ಹೆಚ್ಚು ಬಂದರೆ ಆ ಸಮಾಜ ಸ್ವಾಸ್ಥ್ಯ ಸಮಾಜ ಎಂದು ಅರ್ಥ, ನಮ್ಮ ಸಮಾಜ ಎಷ್ಟು ಸ್ವಾಸ್ಥ್ಯವಾಗಿದೆ ಎಂಬುದನ್ನು ತಿಳಿಯಬೇಕಾರೆ ನ್ಯಾಯಾಲಯದಲ್ಲಿ ದಾಖಲಾದ ಈ ಎರಡು ಪ್ರಕಾರದ ಪ್ರಕರಣಗಳನ್ನು ತುಲನೆ ಮಾಡಬೇಕಾಗುತ್ತದೆ" ಎಂದರು.
ಪ್ರಾರಂಭದಲ್ಲಿ ತುಳುವಿನಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು ಸಭೆಯಲ್ಲಿ ಹಾಜರಿದ್ದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, "ಇದು ಕಾನೂನು ಶಿಬಿರ ಅಲ್ಲ, ಶಿಸ್ತಿನ ಶಿಬಿರ. ಬಹುಶಃ ಈ ಶಿಸ್ತಿನ ಶಿಬಿರಕ್ಕೆ ಮೂಲ ಕಾರಣ ಆಳ್ವಾಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಡಾ. ಮೋಹನ್ ಆಳ್ವ" ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, "ಹಿರಿಯ ಅಧಿಕಾರಿಗಳಾಗಿರಲಿ, ಕಿರಿಯ ಅಧಿಕಾರಿಗಳಾಗಿರಲಿ ಜನಸಂಪರ್ಕದಲ್ಲಿರುವ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಡಿಮೆ ಕೆಲಸ ಕೊಟ್ಟಂತಾಗುತ್ತದೆ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರವರ ಇಲಾಖೆಗಳಿಂದ ಅನುಷ್ಠಾನಗೊಳಿಸುವ ಕಲ್ಯಾಣ ಕಾರ್ಯಕ್ರಮಗಳನ್ನು ಜನರ ಬಳಿಗೆ ಹೋಗಿ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಬೇಕು" ಎಂದರು.
"ಕೆಲವೊಂದು ಸಣ್ಣಪುಟ್ಟ ಕೆಲಸಗಳು ಗ್ರಾಮ ಲೆಕ್ಕಾಧಿಕಾರಿ, ಸಿಡಿಪಿಒ, ತಹಶೀಲ್ದಾರರುಗಳೇ ಮಾಡಬಹುದು ಆದರೆ ಅವುಗಳನ್ನು ಜಿಲ್ಲಾಧಿಕಾರಿ ಕಚೇರಿ ಹಂತಕ್ಕೆ ಬರುತ್ತವೆ. ಮಾಹಿತಿ ಅರಿತಿರುವ ನಾಗರೀಕರು ಈ ದೇಶವನ್ನು ಕಟ್ಟಲು ಅಡಿಪಾಯವಿದ್ದಂತೆ ತಾನು ತಿಳಿದ ಮಾಹಿತಿಯನ್ನು ಹತ್ತು ಜನಗಳಿಗೆ ತಿಳಿಸಿದರೆ ಅನುಕೂಲ, ಸಾಮಾಜಿಕ ಭದ್ರತೆ ಯೋಜನೆಯಡಿ ವಿಕಲಚೇತನರು ಹಾಗೂ ವೃದ್ಧರಿಗೆ ನಿವೃತ್ತಿ ವೇತನದ ಬಗೆಗಿನ ಮಾಹಿತಿಯನ್ನು ಅಧಿಕಾರಿಗಳೇ ಹೇಳಬೇಕಾಗಿಲ್ಲ ಮಾಹಿತಿ ತಿಳಿದಿರುವ ಒಬ್ಬ ನಾಗರೀಕ ಹೇಳಿದರೆ ಸಾಕು" ಎಂದರು.
"ಸಮಾಜ ಸೇವೆ ಮಾಡಲು ದೇಶಕ್ಕಾಗಿ ಹೋರಾಡಲು ದೇಶದ ಗಡಿಗೆ ಹೋಗಬೇಕಾಗಿಲ್ಲ ನಮ್ಮ ನಮ್ಮ ಗ್ರಾಮಗಳು, ಅಕ್ಕಪಕ್ಕದ ಮನೆಗಳಿಗೆ ತಿಳಿಸಿದರೆ ಸಾಕು ಸದೃಢ ಸಮಾಜ ದೇಶವನ್ನು ಕಟ್ಟಬಹುದು" ಎಂದವರು ಸಲಹೆ ನೀಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಸಿಗಬೇಕು ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ನೆರವು ಸಿಗುವಂತೆ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ. ಸೋಮಶೇಖರ್ ಹೇಳಿದರು.
ಸಂವಿಧಾನವನ್ನು ಎಲ್ಲರೂ ಓದಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಕೆಲವರಿಗೆ ಮಾತ್ರ ಅವಕಾಶವಿದೆ. ಅವಕಾಶವಿದ್ದವರು ಕಾನೂನುಗಳನ್ನು ತಿಳಿದುಕೊಂಡು ದೇಶದ ಎಲ್ಲಾ ಪ್ರಜೆಗಳಿಗೂ ಸಿಗುವಂತೆ ಮಾಡಬೇಕು ಎಂದರು.
"ಬುದ್ದಿವಂತಿಕೆ ಹಾಗೂ ಹೃದಯವಂತಿಕೆ ಎರಡೂ ಮುಖ್ಯ, ಬುದ್ದಿವಂತಿಕೆ ಇದ್ದು ಹೃದಯವಂತಿಕೆ ಇಲ್ಲದಿದ್ದರೆ ಪ್ರಯೋಜನವಿಲ್ಲ ಹಾಗೆಯೇ ಹೃದಯವಂತಿಕೆ ಇದ್ದು ಬುದ್ಧಿವಂತಿಕೆ ಇದ್ದರೆ ಅದು ಉಪಯೋಗಕ್ಕೆ ಬರುವುದಿಲ್ಲ ಅವೆರಡನ್ನೂ ಒಂದೇ ರೀತಿಯಲ್ಲಿ ಅನುಸರಿಸಿಕೊಂಡು ಹೋಗಬೇಕು" ಎಂದು ಅವರು ತಿಳಿಸಿದರು.
ಹೈಕೋರ್ಟ್ನ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ. ಬಿ. ವೀರಪ್ಪ, ಬೆಂಗಳೂರಿನ ರಾಜ್ಯ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇಗೌಡ, ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ, ಮೂಡಬಿದ್ರಿ ವಕೀಲರ ಸಂಘದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ತಂತ್ರಿ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮುರಳಿಧರ ಪೈ. ಬಿ ಅವರು ಸ್ವಾಗತಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್ ವರ್ಣೇಕರ್ ವಂದಿಸಿದರು.ಶಿಕ್ಷಣ ಸಂತ ಹರೇಕಳ ಹಾಜಬ್ಬ, ವಕೀಲರು, ವಕೀಲರ ಸಂಘದ ಪದಾಧಿಕಾರಿಗಳು, ರೈತರು, ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.