ಕಾಸರಗೋಡು, ಡಿ.30 (DaijiworldNews/PY): ಕೊರೊನಾ ರೂಪಾಂತರಿ ಒಮಿಕ್ರಾನ್ ಭೀತಿಯಿಂದಾಗಿ ಕೇರಳದಲ್ಲಿ ಇಂದು (30 ರಿಂದ) ರಾತ್ರಿಯಿಂದ ಜನವರಿ 2ರವರೆಗೂ ನೈಟ್ ಕರ್ಫ್ಯೂ ವಿಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ನೈಟ್ ಕರ್ಫ್ಯೂಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಅದರಂತೆ ಡಿಸೆಂಬರ್ 30 ರಿಂದ ಬಾರ್ಗಳು, ಹೋಟೆಲ್ಗಳು, ಕ್ಲಬ್ಗಳು ಮತ್ತು ರೆಸ್ಟೋರೆಂಟ್ ಸೇರಿದಂತೆ ಯಾವುದೇ ಅಂಗಡಿಗಳು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ತನಕ ಕಾರ್ಯನಿರ್ವಹಿಸುವಂತಿಲ್ಲ.
ಬೀಚ್, ಶಾಪಿಂಗ್ ಮಾಲ್, ಸಾರ್ವಜನಿಕ ಉದ್ಯಾನವನ ಸೇರಿದಂತೆ ಇತರ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಶಬರಿಮಲೆ ಮತ್ತು ಶಿವಗಿರಿ ದೇವಸ್ಥಾನಕ್ಕೆ ತೆರಳುವವರಿಗೆ ವಿನಾಯಿತಿ ನೀಡಲಾಗಿದೆ.
ರಾತ್ರಿ 10 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಕ್ಕೂ ನಿರ್ಬಂಧ ವಿಧಿಸಲಾಗಿದೆ. ವಿವಾಹ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ಎಲ್ಲಾ ಕಾರ್ಯಕ್ರಗಳು ರಾತ್ರಿ 10 ಗಂಟೆ ಬಳಿಕ ನಡೆಸುವಂತಿಲ್ಲ. ಈ ಬಗ್ಗೆ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ. ಸೋಂಕಿನ ಪ್ರಮಾಣ ಏರಿಕೆಯಾದಲ್ಲಿ ಜನವರಿ 2ರ ಬಳಿಕವೂ ರಾತ್ರಿ ಕರ್ಫ್ಯೂ ಮುಂದುವರಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ.