ಮಂಗಳೂರು, ಡಿ.30 (DaijiworldNews/PY): ಎನ್ ಶಶಿಕುಮಾರ್ ಅವರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ್ದು, ಈವರೆಗೆ ಹಲವಾರು ಪ್ರಕರಣಗಳನ್ನು ಬೇಧಿಸಿದ್ದಾರೆ.
ಗುರುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡ ಬಳಿಕ ಬೇಧಿಸಲಾದ ಪ್ರಮುಖ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
"2021ರಲ್ಲಿ 13 ಪ್ರಮುಖ ಪ್ರಕರಣಗಳನ್ನು ಭೇದಿಸಲಾಯಿತು. ಜನವರಿ ತಿಂಗಳಿನಲ್ಲಿ ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವಸ್ಥಾನ ಅಪವಿತ್ರಗೊಳಿಸಿದ ಬಗ್ಗೆ ಎರಡು ಪ್ರಕರಣಗಳು ದಾಖಲಾಗಿದ್ದು, ಈ ರೀತಿಯಾದ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಡಿ.28ರಂದು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.
"ತೊಕ್ಕೊಟ್ಟಿನಲ್ಲಿ ಗೋಮಾಂಸದ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿಬಾಲಕನನ್ನು ಪಬ್ಜಿ ಆಟದ ಸೇಡಿನಿಂದ ಕೊಲೆ ಮಾಡಿದ್ದು, ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ, ಐಸಿಸ್ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಉಳ್ಳಾಲದ ವ್ಯಕ್ತಿಯ ಬಂಧನ, ನಾಗಬನ ಅಪವಿತ್ರಗೊಳಿಸಿದ ಅಪರಾಧಿಗಳ ಬಂಧನ ಮುಂದಾದ ಪ್ರಕರಣಗಳು ಸೇರಿವೆ" ಎಂದಿದ್ದಾರೆ.
"ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹನಿ ಟ್ರ್ಯಾಪ್ ಪ್ರಕರಣವನ್ನು ಭೇದಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಪೊಲೀಸ್ ಪೇದೆಯ ಮೇಲೆ ಹಲ್ಲೆಯ ಸಂಬಂಧ ಮಾಯ ಹಾಗೂ ಕಾರ್ಖಾನಾ ತಂಡದ ಸದಸ್ಯರ ಬಂಧನ, ಕಳ್ಳತನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಪೂಜಾರಿ ಸಹಚರರ ಬಂಧನ, ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ಸರಣಿ ಕಳ್ಳತನ, ತಲಪಾಡಿಯಲ್ಲಿ ನಕಲಿ ಆರ್ಟಿಪಿಸಿಆರ್ ಪ್ರಮಾಣಪತ್ರದಲ್ಲಿ ಭಾಗಿಯಾಗಿರುವ ಆರೋಪಿಗಳ ಬಂಧಿಸಲಾಗಿದೆ" ಎಂದು ಹೇಳಿದ್ದಾರೆ,
"ಕಾನೂನು ವಿದ್ಯಾರ್ಥಿಯ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ, ಟೈಲ್ಸ್ ಕಾರ್ಖಾನೆಯಲ್ಲಿ 8 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದಿದ್ದಾರೆ.
"ಎನ್ಡಿಪಿಎಸ್ 328 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 492 ಮಂದಿಯನ್ನು ಬಂಧಿಸಲಾಗಿದೆ. ಗಾಂಜಾ, ಎಂಡಿಎಂಎ, ಕೊಕೇನ್ ಮತ್ತು ಎಲ್ಎಸ್ಡಿ ಸೇರಿದಂತೆ 85,00,000 ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಪ್ರಕರಣದಲ್ಲಿ 5 ರಿಂದ 6 ನೈಜೀರಿಯನ್ ಪ್ರಜೆಗಳು ಮತ್ತು ಒಮನ್ ಪ್ರಜೆ ಸೇರಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ" ಎಂದಿದ್ದಾರೆ.
"ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಬ್ಲಿಕ್ ಔಟ್ ರೀಚಿಂಗ್ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದ್ದು, ಆಪರೇಷನ್ ಸುರಕ್ಷಾ, ಕೊರೊನಾ ಸಮನ್ವಯ ಕಾರ್ಯಕ್ರಮ, ಡ್ರಗ್ಸ್ ಡಿಸ್ಪೋಸಲ್, ವಿದೇಶಿಯರಿಗೆ ಸಮನ್ವಯ ಕಾರ್ಯಕ್ರಮ, ಪೊಲೀಸ್ ಕ್ಯಾಂಟೀನ್, ನಿಮ್ಮಿಂದ ಕರೆ ನೀವಿರುವಲ್ಲಿಗೆ ನಾವು, ಆಸಕ್ತ ಪೊಲೀಸ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ತರಬೇತಿ, ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ, ಪ್ರಾಪರ್ಟಿ ಪರೇಡ್, ಪರಿವರ್ತನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು" ಎಂದು ಹೇಳಿದ್ದಾರೆ.
"ರ್ಯಾಗಿಂಗ್ ಸಂಬಂಧ ಆರು ಪ್ರಕರಣಗಳನ್ನು ದಾಖಲಿಸಕೊಳ್ಳಲಾಗಿದೆ. 5 ನೈತಿಕ ಪೊಲೀಸ್ಗಿರಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ" ಎಂದಿದ್ದಾರೆ.
"146 ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿದ್ದರು" ಎಂದು ಮಾಹಿತಿ ನೀಡಿದ್ದಾರೆ.
"2021ರಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 1,256 ರೌಡಿಶೀಟ್ಗಳನ್ನು ಮುಕ್ತಾಯಗೊಳಿಸಿ ಹೊಸದಾಗಿ 315 ರೌಡಿಶೀಟ್ಗಳನ್ನು ತೆರೆಯಲಾಗಿದೆ. ಒಟ್ಟು 140 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹಾಗೂ 21 ಪಿಎಸ್ಐಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಸಿವಿಲ್ ವಿಭಾಗದಲ್ಲಿ ಒಟ್ಟು 19 ಕಾನ್ಸ್ಟೇಬಲ್ಗಳಿಗೆ ಹೆಡ್ ಕಾನ್ಸ್ಟೇಬಲ್ ಆಗಿ ಹಾಗೂ 2 ಎಎಸ್ಐ ಅವರಿಗೆ ಪಿಎಸ್ಐ ಆಗಿ ಭಡ್ತಿ ನೀಡಲಾಗಿದೆ. ಸಿಎಆರ್ ವಿಭಾಗದಲ್ಲಿ 133 ಕಾನ್ಸ್ಟೇಬಲ್ಗಳಿಗೆ ಹೆಡ್ ಕಾನ್ಸ್ಟೇಬಲ್ ಆಗಿ ಹಾಗೂ 1 ಹೆಡ್ ಕಾನ್ಸ್ಟೇಬಲ್ಗೆ ಎಆರ್ಎಸ್ಐ ಆಗಿ ಹಾಗೂ 1 ಎಆರ್ಎಸ್ಗೆ ಆರ್ಎಸ್ಐ ಆಗಿ ಭಡ್ತಿ ನೀಡಲಾಗಿದೆ" ಎಂದು ಹೇಳಿದ್ದಾರೆ.
"ಕೊರೊನಾ ಸಮಯದಲ್ಲಿ, ಸಾಂಕ್ರಾಮಿಕ ಕಾಯ್ದೆಯಡಿಯಲ್ಲಿ 304 ಮತ್ತು ಎನ್ಡಿಎಂ ಕಾಯಿದೆಯಡಿಯಲ್ಲಿ 310 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾಸ್ಕ್ ನಿಯಮ ಉಲ್ಲಂಘಿಸಿದ 25,145 ಮಂದಿಗೆ ದಂಡ ವಿಧಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದ 104 ಮಂದಿಗೆ ದಂಡ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮತ್ತು ತಂಬಾಕು ಸೇವನೆಗೆ ಸಂಬಂಧಿಸಿದಂತೆ ಒಟ್ಟು 2,524 ಪ್ರಕರಣಗಳನ್ನು ದಾಖಲಿಸಲಾಗಿದ್ದು, 615 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು 3,618 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ದಂಡದ ರೂಪದಲ್ಲಿ 39,92,383 ರೂ.ಗಳನ್ನು ಸಂಗ್ರಹಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.