ಮಂಗಳೂರು, ಡಿ 02(SM): ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೊಂದಿಗಿದ್ದು ನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ಈಗ ಪತ್ತೆಯಾಗಿದ್ದಾನೆ. ಆ ಮೂಲಕ ಕಳೆದ ಹಲವು ತಿಂಗಳುಗಳಿಂದ್ದ ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಕೇರಳದ ಕೊಚ್ಚಿನ್ ನಲ್ಲಿದ್ದ ವಿನಾಯಕ್ ನನ್ನು ಪತ್ತೆ ಮಾಡಿ ಪೊಲೀಸರು ಮಂಗಳೂರಿಗೆ ಕರೆ ತಂದಿದ್ದಾರೆ. ಹೆತ್ತವರ ಬಗ್ಗೆ ಬೇಸರಗೊಂಡು ಕೊಚ್ಚಿನ್ ಗೆ ತೆರಳಿದ್ದಾಗಿ ವಿನಾಯಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇತ್ತೀಚೆಗೆ ವಿನಾಯಕ್ ಪೋಷಕರು ಮಗನನ್ನು ಹುಡುಕಿ ತರುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು.
ಇಷ್ಟು ಮಾತ್ರವಲ್ಲದೆ, ಅಕ್ಟೋಬರ್ 8ರಂದು ವಿನಾಯಕ್ ದಿಢೀರ್ ಆಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಮದನ್ ಬಗ್ಗೆ ಸಂಶಯಗೊಂಡು ಉರ್ವಾ ಠಾಣೆಗೆ ವಿನಾಯಕ್ ಪೋಷಕರು ದೂರು ನೀಡಿದ್ದರು. ಆ ಬಳಿಕ ಹೈಕೋರ್ಟ್ ಚಾಟಿ ಬೀಸಿದ್ದರಿಂದ ಈ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿತ್ತು.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಮದನ್ ಮಹಿಳೆಯೊಬ್ಬರ ಜೊತೆ ಹೊಂದಿದ್ದ ಸಂಬಂಧ ತಮ್ಮ ಮಗನ ನಾಪತ್ತೆಗೆ ಪ್ರಮುಖ ಕಾರಣ ಎಂದು ವಿನಾಯಕನ ಪೋಷಕರು ಆರೋಪಿಸಿದ್ದರು. ಅದರ ಬೆನ್ನಲ್ಲೇ ಇದೀಗ ನಾಪತ್ತೆಯಾಗಿದ್ದ ವಿನಾಯಕ್ ಪತ್ತೆಯಾಗಿದ್ದಾನೆ. ಅಲ್ಲದೆ ಆತ ಪೋಷಕರ ಮೇಲೆಯೇ ಆರೋಪ ಮಾಡಿರುವುದು ಅಚ್ಚರಿಯನ್ನುಂಟು ಮಾಡಿದೆ.