ಕುಂದಾಪುರ, ಡಿ 30 (DaijiworldNews/MS): ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ವಿಚಾರಣೆ ಇಲ್ಲಿನ ನ್ಯಾಯಾಲಯದಲ್ಲಿ ಜ.4 ರಿಂದ ಆರಂಭವಾಗಲಿದೆ. ಅವಳಿ ಕೊಲೆ ಪ್ರಕರಣದ ವಿಚಾರಣೆಯನ್ನು ಮುಂದಿನ ಆರು ತಿಂಗಳೊಳಗೆ ಮುಗಿಸುವಂತೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ ಮಹೇಶ್ವರಿ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿತ್ತು.ಈ ಹಿನ್ನಲೆಯಲ್ಲಿ ಜನವರಿ ನಾಲ್ಕರಿಂದ ವಿಚಾರಣೆ ಆರಂಭವಾಗಲಿದ್ದು ಜನವರಿ 4, 5 ಮತ್ತು 7ರಂದು ವಿಚಾರಣೆಗೆ ಹಾಜರಾಗುವಂತೆ 10 ಮಂದಿಗೆ ಸಮನ್ಸ್ ಜಾರಿಯಾಗಿದೆ. ಮಾರ್ಚ್ ವೇಳೆಗೆ ವಿಚಾರಣೆ ಮುಗಿಯುವ ಸಾಧ್ಯತೆ ಇದೆ.
2019 ರ ಜ.26 ರಾತ್ರಿ ಮಣೂರು -ಚಿಕ್ಕನಕೆರೆಯಲ್ಲಿ ಶೌಚಾಲಯದ ಹುಂಡಿ ನಿರ್ಮಿಸುವ ವಿಚಾರದಲ್ಲಿ ಸೃಷ್ಟಿಯಾದ ತಕರಾರು ವಿವಾದಕ್ಕೆ ತಿರುಗಿ ಹುಣೆಕಟ್ಟೆ ಯತೀಶ್ ಕಾಂಚನ್ ಹಾಗೂ ಕೋಟ ಬಾರಿಕೆರೆ ನಿವಾಸಿ ಭರತ್ ಶ್ರೀಯನ್ ಹತ್ಯೆಗೆ ಕಾರಣವಾಗಿತ್ತು.