ಮೂಡುಬಿದಿರೆ, 02 (MSP): ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಇಲ್ಲಿನ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ನಡೆದ ಹದಿನಾರನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ವೇದಿಕೆಯಲ್ಲಿ ‘ತುಳು ಲಿಪಿ’ ಬಳಕೆ, ನೋಡುಗರ ಗಮನಸೆಳೆದಿದೆ.
ವೇದಿಕೆಯ ಮುಂಭಾಗದಲ್ಲಿ ‘ಕೋಟಿ-ಚೆನ್ನಯ’ ಹೆಸರು ಬರೆಯಲಾಗಿದೆ. ವೇದಿಕೆಯಲ್ಲಿ ಕನ್ನಡದಲ್ಲಿ ಬರೆದಿರುವ ‘ಹದಿನಾರನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಬಯಲು ಕಂಬಳೋತ್ಸವ. ಕಡಲಕೆರೆ ನಿಸರ್ಗದಾಮ, ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಒಂಟಿಕಟ್ಟೆ, ಮೂಡುಬಿದಿರೆ, ದ.ಕ ಹಾಗೂ ದಿನ, ದಿನಾಂಕವನ್ನು ತುಳು ಲಿಪಿಯಲ್ಲೇ ಬರೆಯಲಾಗಿದೆ.
ಅಬ್ಬಕ್ಕಗೆ ಗೌರವ:
ಪೂರ್ಚುಗೀಸರ ವಿರುದ್ಧ ಹೋರಾಡಿದ ಚೌಟ ರಾಣಿ, ಮೂಡುಬಿದಿರೆ ಮಣ್ಣಿನ ಮಗಳು ವೀರ ರಾಣಿ ಅಬ್ಬಕ್ಕಗಳನ್ನು ಮೂಡುಬಿದಿರೆ ಕಂಬಳದಲ್ಲಿ ಸ್ಮರಿಸಲಾಗಿದೆ. ಅಬ್ಬಕ್ಕಳ ಭಾವಚಿತ್ರವನ್ನು ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಒಂಟಿಕಟ್ಟೆಗೆ ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಎಂದು ಹೆಸರಿಸಿ ಕಳೆದ ೧೫ ವರ್ಷಗಳಿಂದ ಕೆ.ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಡೆದಿರುವ ಕಂಬಳಗಳು ಕೂಡ ಗಮನಾರ್ಹ. ಅಬ್ಬಕ್ಕ ವಂಶಸ್ಥರಾದ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಚೌಟರ ಅರಮನೆಗೆ ಆಡಳಿತಕ್ಕೊಳಪಟ್ಟ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಪ್ರಸಾದವನ್ನು ಕಂಬಳ ಕರೆಗೆ ಹಚ್ಚುವುದು ಕೂಡ ಇಲ್ಲಿನ ವಿಶೇಷತೆ. ಇಂತಹದೊಂದು ಸಂಪ್ರದಾಯ ಮೂಡುಬಿದಿರೆಯ 16 ವರ್ಷಗಳ ಕಂಬಳಗಳಲ್ಲಿ ಕಾಣಸಿಕ್ಕಿರುವುದು ಕೂಡ ಗಮನಾರ್ಹ ಸಂಗತಿ. ತುಳು ಲಿಪಿ ಬಳಕೆ, ಅಬ್ಬಕ್ಕಳ ಸ್ಮರಣೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳು ಬರುತ್ತಿವೆ.