ಕಾರ್ಕಳ, ಡಿ.29 (DaijiworldNews/PY): "ಮೂಲನಿವಾಸಿಗಳ ರಕ್ಷಣೆಗೆ ಸರಕಾರ ಕಟ್ಟಿಬದ್ಧವಾಗಬೇಕು" ಎಂದು ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಮೂಲನಿವಾಸಿಗಳಾದ ಕೊರಗರ ಮೇಲೆ ಕೋಟಾ ಪೊಲೀಸರು ನಡೆಸಿದ ಹಲ್ಲೆಯ ಕುರಿತು ಖಂಡನೀಯ ವ್ಯಕ್ತಪಡಿಸಿದ್ದಾರೆ.
"ಉಡುಪಿ ಕೋಟಾದ ಚಿಟ್ಟಿ ಬೆಟ್ಟು ಎಂಬಲ್ಲಿ ಕೊರಗರ ಮನೆಯೊಂದರಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಎಸ್ಐ ಸಂತೋಷ್ ಹಾಗೂ ತಂಡ ತೆರಳಿ ಡಿಜೆ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಮಹಿಳೆಯರು ವೃದ್ಧರು ಎನ್ನದೆ ಲಾಠಿಚಾರ್ಜ್ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಇಲ್ಲಿ ನಡೆದಿರುವುದು ಡ್ರಗ್ಸ್ ಅಥವಾ ರೇವು ಪಾರ್ಟಿಯಲ್ಲ. ಮದುವೆಯ ಮುನ್ನ ತುಳುನಾಡಿನ ಸಂಪ್ರಾದಾಯದಂತೆ ನಡೆಸಿದ ಸಾಧಾರಣ ಮೆಹಂದಿ ಕಾರ್ಯಕ್ರಮ ಅನ್ನೋದನ್ನು ಪೊಲೀಸ್ ಇಲಾಖೆ ಗಮನಿಸಬೇಕು. ಅನಿವಾರ್ಯವಾದಲ್ಲಿ ಪ್ರಕರಣ ದಾಖಲಿಸಬೇಕೆ ಹೊರತು ಲಾಠಿಚಾರ್ಜ್ ಮಾಡಿರುವುದು ಸಮುದಾಯದ ಮೇಲೆ ಮಾಡಿದ ದೌರ್ಜನ್ಯವಾಗಿದೆ" ಎಂದಿದ್ದಾರೆ.
"ಜಿಲ್ಲಾಧಿಕಾರಿಯವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರು ಸೂಕ್ತ ತನಿಖೆ ನಡೆಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಬೇಕು" ಎಂದು ಆಗ್ರಹಿಸಿದ್ದಾರೆ.