ಕಾರ್ಕಳ,ಡಿ 02 (MSP) : ಅಂತರ್ ಜಿಲ್ಲಾ ಕುಖ್ಯಾತ ಚೋರನೊಬ್ಬನನ್ನು ಉಡುಪಿ ಜಿಲ್ಲಾ ಅಪರಾಧ ಪತ್ತೆದಳ ಬಂಧಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರ ಸಾಸಲು ಹೋಬಳಿಯ ನರಸಿಂಹ ರಾಜು ಅಲಿಯಾಸ್ ಬಸವರಾಜು ಅಲಿಯಾಸ್ ರಾಜು(41) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿ ಬಸವರಾಜು ಆಲಿಯಾಸ್ ರಾಜು
ಕಳವು ಗೈದಿದ್ದ 7 ಕೆ.ಜಿ ಬೆಳ್ಳಿಯನ್ನು ಪೊಲೀಸರು ವಶಪಡಿಸಿದ್ದು, ಅದರ ಮೌಲ್ಯ ರೂ 2,07,000 ಆಗಿರುತ್ತದೆ. ಆರೋಪಿ ಮತ್ತು ಸ್ವತ್ತನ್ನು ಬ್ರಹ್ಮಾವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿ ನರಸಿಂಹ ರಾಜು ಅಲಿಯಾಸ್ ಬಸವರಾಜು ಅಲಿಯಾಸ್ ರಾಜು ವಿರುದ್ಧ ಬೆಂಗಳೂರು ಗ್ರಾಮಾಂತರ, ತುಮಕೂರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿರುವ ದೇವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ 14 ಪ್ರಕರಣ ದಾಖಲಾಗಿರುತ್ತದೆ. ವಿಚಾರಣೆ ಸಂದರ್ಭದಲ್ಲಿ ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ವಾರೆಂಟ್ ಜಾರಿಗೊಂಡಿದೆ.
ಉಡುಪಿ ಜಿಲ್ಲಾ ವ್ಯಾಪ್ತಿಯ ಬ್ರಹ್ಮಾವರ ಕೀಳಿಂಜೆ ಶ್ರೀ ಮಹಾವಿಷ್ಣು, ಮಹಾಲಿಂಗೇಶ್ವರ ದೇವಸ್ಥಾನ, ಕಾರ್ಕಳ ನಿಂಜೂರು ಗುರು ನಿತ್ಯಾನಂದ ಭಜನಾ ಮಂದಿರ, ಶಿವಪುರ ಯಡ್ಡೆ ಬ್ರಹ್ಮ ಬೈದರ್ಕಳ ಗರಡಿ, ಕಾರ್ಕಳ ಎಣ್ಣೆಹೊಳೆ ಶ್ರೀ ಗಣೇಶ ಮಂದಿರಗಳಲ್ಲಿ ನಡೆದಿರುವ ಕಳವು ಕೃತ್ಯದಲ್ಲಿ ಈತ ನೇರವಾಗಿ ಪಾಲ್ಗೊಂಡಿದ್ದನು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮತ್ತು ಉಡುಪಿ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಟಿ.ಆರ್.ಜೈಶಂಕರ್ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.