ಮಂಗಳೂರು ಡಿ 02 (MSP):ತೋಟ ಬೆಂಗ್ರೆ ಪ್ರದೇಶದಲ್ಲಿ ವಿಹಾರಕ್ಕೆ ಬಂದಿದ್ದ ಯುವ ಜೋಡಿಗೆ ಹಲ್ಲೆ ನಡೆಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ಪರ ವಾದಿಸಲು ನ್ಯಾಯವಾದಿಗಳು ಮುಂದಾಗದ ಕಾರಣ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಕಸ್ಟಡಿಗೆ ಪಡೆದಿದ್ದ ಆರೋಪಿಗಳನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಬಂಧಿತ ಆರೋಪಿಗಳ ಪರ ವಾದಿಸದಂತೆ ದ.ಕ. ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘವು ಜಿಲ್ಲಾ ವಕೀಲರ ಸಂಘಕ್ಕೆ ಈ ಹಿಂದೆ ಮನವಿ ಮಾಡಿತ್ತು. ಸುಶಿಕ್ಷಿತರ ಜಿಲ್ಲೆ ಎಂಬ ಖ್ಯಾತಿಗೆ ಈ ಪ್ರಕರಣ ಕಳಂಕವನ್ನುಂಟು ಮಾಡಿದೆ. ಇಂಥಹ ಹೀನ ಕೃತ್ಯ ಎಸಗಿದ ಆರೋಪಿಗಳು ಸಮಾಜಕ್ಕೆ ಮಾರಕ. ಹೀಗಾಗಿ ಬಂಧನವಾದ ಆರೋಪಿಗಳ ಪರ ವಾದಿಸದೆ ದುಷ್ಕೃತ್ಯ ಎಸಗಿದ ಕೀಚಕರಿಗೆ ಕಠಿಣ ಶಿಕ್ಷೆಯಾಗಲು ಸಹಕರಿಸಬೇಕು ಎಂದು ಮನವಿ ಸಲ್ಲಿಸಿತ್ತು.
ದ.ಕನ್ನಡ ಜಿಲ್ಲಾ ವಕೀಲರ ಸಂಘವು, ಯಾರೊಬ್ಬರು ಕೂಡಾ ಆರೋಪಿಗಳ ಪರ ವಾದಿಸದಂತೆ ವಕೀಲರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿತ್ತು. ಒಂದು ವೇಳೆ ಯಾರಾದರೂ ಲಾಯರ್ ಗಳು ಆರೋಪಿಗಳ ಪರ ವಕಾಲತ್ತು ನಡೆಸಿದರೆ ಅವರ ಕಚೇರಿ ಮುಂದೆ ವಿದ್ಯಾರ್ಥಿ ಸಂಘ, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿತ್ತು.