ಮಂಗಳೂರು, ಡಿ. 26 (DaijiwoldNews/HR): ಮುಲ್ಕಿ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಅಂತಲಚ್ಚಿಲ್ ನಾಗಬನದ ಗುಡ್ಡೆ ಬಳಿ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದ ಘಟನೆ ನಡೆದಿದೆ.
ಕೆಲವು ತಿಂಗಳ ಹಿಂದೆ ಕಿನ್ನಿಗೋಳಿ-ತಾಳಿಪಾಡಿ ಪರಿಸರದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಮನೆಯವರ ನಾಯಿ ಸಹಿತ ಅನೇಕ ಸಾಕುಪ್ರಾಣಿಗಳು ನಾಪತ್ತೆಯಾಗಿ, ಚಿರತೆಗೆ ಆಹಾರವಾಗಿದ್ದವು.
ಈ ಸಂದರ್ಭ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ಬೋನು ಇರಿಸಿದ್ದರು.
ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಆಹಾರ ಹುಡುಕಿಕೊಂಡು ಬಂದ ಚಿರತೆ ಬೋನಿನೊಳಗೆ ಸೆರೆಯಾಗಿದೆ. ಇದೀಗ ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆ ನೋಡಲು ಕುತೂಹಲಿಗರ ದಂಡೇ ಸೇರುತ್ತಿದೆ.