ಕುಂದಾಪುರ, ಡಿ.24 (DaijiworldNews/PY): ಕುಂದಾಪುರ ರೈಲು ನಿಲ್ದಾಣದಲ್ಲಿ ಪಿಆರ್ಎಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಆರಂಭಿಸಲು ರೈಲ್ವೆ ಇಲಾಖೆ ಸೂಚನೆ ನೀಡಿದ್ದು, ಸುದೀರ್ಘ ಕಾಲದ ಸಾರ್ವಜನಿಕರ ಬೇಡಿಕೆ ಈಡೇರಿಸುವಲ್ಲಿ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ನಡೆಸಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.
ಸಚಿವರ ಮನವಿಯ ಮೇರೆಗೆ ಹೆಚ್ಚುವರಿಯಾಗಿ ಕುಂದಾಪುರ ನಿಲ್ದಾಣದಲ್ಲಿಯೇ ಜೊಸ ಪಿಆರ್ಎಸ್ ವ್ಯವಸ್ಥೆ ಆರಂಭಿಸಲು ರೈಲ್ವೇ ಮಂಡಳಿ ಕೊಂಕಣಿ ರೈಲ್ವೆಗೆ ಸೂಚನೆ ನೀಡಿದೆ.
ಪ್ರಸ್ತುತ ಕುಂದಾಪುರ ಪೋಸ್ಟ್ ಆಫೀಸ್ ಪಿಆರ್ಎಸ್ನಲ್ಲಿನ ತಾಂತ್ರಿಕ ಸಮಸ್ಯೆಗಳು, ರಜಾ ದಿನಗಳ ಅಲಭ್ಯತೆ, ಇತರ ಟಿಕೆಟ್ ಸಂಬಂಧಿ ಕೆಲಸಗಳಾದ ರದ್ಧತಿ, ಬದಲಾವಣೆ ಇತ್ಯಾದಿ ಚಟುವಟಿಕೆಗಳ ಕೊರತೆ ನೀಗಿಸಲು ರೈಲ್ವೆ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದರು.
ಉದ್ಯೋಗ ಹಾಗೂ ಉದ್ಯಮಕ್ಕಾಗಿ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಜತೆಗೆ, ಕೊಲ್ಲೂರು, ಆನೆಗುಡ್ಡೆ, ಮಾರಣಕಟ್ಟೆಯಂತ ಪ್ರಸಿದ್ದ ತೀರ್ಥ ಕ್ಷೇತ್ರಗಳ ಹತ್ತಿರದ ಹಾಗು ಪ್ರವಾಸಿ ನಿಲ್ದಾಣವಾದ ಕುಂದಾಪುರ ನಿಲ್ದಾಣಕ್ಕೆ ಬರುವ ದೂರ ಪ್ರಯಾಣಿಕರಿಗೂ ವಾರದ ಎಲ್ಲಾ ದಿನ ಟಿಕೆಟ್ ರೈಲ್ವೆ ನಿಲ್ದಾಣದಲ್ಲಿಯೇ ಸಿಗಬೇಕಾದ ಅನಿವಾರ್ಯತೆ ಇತ್ತು, ಜತೆಗೆ ಪಿಆರ್ಎಸ್ ಬಂದರೆ, ರೈಲ್ವೆ ನಿಲ್ದಾಣದಲ್ಲಿಯೇ ಜೀವನೋಪಾಯ ಹೊಂದಿರುವ ರಿಕ್ಷಾ, ಅಂಗಡಿ, ಕ್ಯಾಂಟೀನ್ ಗಳಿಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ಭರವಸೆ ಇದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲು ಮಂಡಳಿಯ ಅಧಿಕಾರಿಗಳಿಗೆ ಸಂಪರ್ಕಿಸಿ, ಕುಂದಾಪುರ ನಿಲ್ದಾಣದಲ್ಲಿ ಪಿಆರ್ಎಸ್ ಆರಂಭಿಸಲು ಮನವಿ ಮಾಡಿದ್ದರು.
ಕೊಂಕಣ ರೈಲ್ವೆಯು ತಕ್ಷಣದಲ್ಲಿಯೇ ಪಿಆರ್ಎಸ್ ವ್ಯವಸ್ಥೆಯನ್ನು ತಕ್ಷಣದಲ್ಲೇ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿಆರಂಭಿಸಲಿದೆ.
ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಪೂರೈಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ, ಸಚಿವೆ ಶೋಭಾ ಕರಂದ್ಲಾಜೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.