ಕಾಸರಗೋಡು, ನ 30 (SM): ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಮಿಂಚಿನ ದಾಳಿ ನಡೆಸಿ ಬಂಬ್ರಾಣ ಉಳುವಾರಿನಲ್ಲಿ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ಆರು ದೋಣಿಗಳನ್ನು ಜೆಸಿಬಿ ಬಳಸಿ ನಾಶಪಡಿಸಿದೆ. ದಾಳಿಯ ವೇಳೆ ದೋಣಿಗಳಲ್ಲಿದ್ದ 11 ಮಂದಿ ಪರಾರಿಯಾಗಿದ್ದಾರೆ.
ಉತ್ತರ ಭಾರತೀಯರ ಸಹಿತ ಆರೋಪಿಗಳನ್ನು ಗುರುತಿಸಲಾಗಿದ್ದು, 15 ದಿನಗಳ ಅವಧಿಯಲ್ಲಿ ಇವರನ್ನು ಬಂಧಿಸುವಂತೆ ಕುಂಬಳೆ ಠಾಣಾಧಿಕಾರಿಗೆ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಆದೇಶಿಸಿದ್ದಾರೆ.
ನ.29ರಂದು ಸಂಜೆ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಉಳುವಾರು ಕಡವು ಎಂಬಲ್ಲಿ ಈ ದಾಳಿ ನಡೆಸಿತ್ತು. ದೋಣಿಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದವರು ಅಧಿಕಾರಿಗಳನ್ನು ಕಂಡು ಪರಾರಿಯಾಗಿದ್ದರು. ಅಧಿಕಾರಿಗಳು ಹಿಂಬಾಲಿಸಿದರೂ ಇವರನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆರೋಪಿಗಳ ಮೊಬೈಲ್ ಫೋನ್, ಗುರುತುಚೀಟಿ, ಮರಳು ಸಾಗಾಟಕ್ಕೆ ಸಂಬಂಧಿಸಿದ ದಾಖಲೆಪತ್ರಗಳು ಪತ್ತೆಯಾಗಿದ್ದು, ಜಿಲ್ಲಾಧಿಕಾರಿ ವಶಪಡಿಸಿಕೊಂಡಿದ್ದಾರೆ.
ದಿನನಿತ್ಯ ಅಕ್ರಮವಾಗಿ ಕನಿಷ್ಠ 8 ಲೋಡ್ ಮರಳು ಸಾಗಾಟವಾಗತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪರಾರಿಯಾದ ಆರೋಪಿಗಳ ಜೊತೆಗೆ ಈ ಅಕ್ರಮಕ್ಕೆ ಸಹಾಯ ಒದಗಿಸುವವರನ್ನೂ ಪತ್ತೆಮಾಡಿ ಬಂಧಿಸುವಂತೆ ಕುಂಬಳೆ ಪೊಲೀಸರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ದಾಳಿ ನಡೆಸಿದ ತಂಡದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಮಂಜೇಶ್ವರ ತಹಸೀಲ್ದಾರ್ ಝಾಕೀರ್ ಹುಸೇನ್, ಗ್ರಾಮಾಧಿಕಾರಿ ಕೀರ್ತನಾ ಸಹಿತ ಅಧಿಕಾರಿಗಳು ಇದ್ದರು.