ಕಾಸರಗೋಡು, ನ 30(SM): ಮುಳ್ಳುಹಂದಿ ಹಿಡಿಯಲು ಸುರಂಗದೊಳಗೆ ನುಗ್ಗಿದ ಯುವಕ ಮೃತಪಟ್ಟ ದಾರುಣ ಘಟನೆ ಧರ್ಮತಡ್ಕ ಬಾಳಿಗೆಯಲ್ಲಿ ನಡೆದಿದೆ. 22 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಮೃತದೇಹವನ್ನು ಹೊರತೆಗೆಯಲಾಗಿದೆ. ಧರ್ಮತಡ್ಕ ಪೊಸಡಿಗುಂಪೆಯ ಕೂಲಿ ಕಾರ್ಮಿಕ ನಾರಾಯಣ ನಾಯ್ಕ್(35) ಮೃತಪಟ್ಟರು.
ಶುಕ್ರವಾರ ಸಂಜೆ 5.30ರ ಸುಮಾರಿಗೆ ಘಟನೆ ನಡೆದಿದೆ. ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯರು ತಡರಾತ್ರಿ ತನಕ ಕಾರ್ಯಾಚರಣೆ ನಡೆಸಿದರೂ ಹೊರತೆಗೆಯಲು ಸಾಧ್ಯವಾಗಿರಲಿಲ್ಲ.
ಬಳಿಕ ಇಂದು ಬೆಳಿಗ್ಗೆಯಿಂದ ಉಪ್ಪಳ ಮತ್ತು ಕಾಸರಗೋಡಿನಿಂದ ಆಗಮಿಸಿದ ಆಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಮಣ್ಣಿನಡಿ ಸಿಲುಕಿದ್ದ ನಾರಾಯಣ ಅವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಇಂದು ಬೆಳಗ್ಗೆಯಿಂದ ಸತತ ಏಳು ಗಂಟೆಗಳ ಕಾರ್ಯಾಚರಣೆಯ ಬಳಿಕ ಮೃತದೇಹವನ್ನು ಹೊರತೆಗೆಯಲಾಯಿತು.