ತೆಲಂಗಾಣ, ನ 30 (MSP): ಚುನಾವಣೆಯಲ್ಲಿ ಮತ ಗಳಿಕೆಗಾಗಿ ಅಭ್ಯರ್ಥಿಗಳ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಅನ್ನೋದು ಇದಕ್ಕೆ ಇರಬೇಕು. ಸೀರೆ, ಹಣ, ಹೆಂಡ ಹಂಚಿ ಮತ ಗಳಿಸೋದು ಹಳೆ ಸ್ಟೈಲ್ ಎಂದು ಹೊಸ ಹೊಸ ಗಿಮಿಕ್ ಮಾಡೋದು ರಾಜಕಾರಣಿಗಳಿಗೆ ಸಿದ್ದಹಸ್ತವಾಗಿರುತ್ತದೆ.
ತೆಲಂಗಾಣದಲ್ಲಿ ಈಗ ವಿಧಾನಸಭಾ ಚುನಾವಣೆ ಹವಾ. ಮತಕ್ಕಾಗಿ ಮನವೊಲಿಸಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತಿನಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣವನ್ನು ಕೂಡಾ ಸಮರ್ಥವಾಗಿ ಕೆಲವು ಅಭ್ಯರ್ಥಿಗಳು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಹೋಗಿ, "ಓಟಿಗಾಗಿ ಹೀಗೂ ಮಾಡ್ತಾರಾ"? ಎಂದು ಜನ ಆಡಿಕೊಳ್ಳುವಂತಾಗಿದೆ.
ತೆಲಂಗಾಣದ ಬಲಿಷ್ಟ ಪಕ್ಷದ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಗುವಿನ "ಹಿಂಬಾಗ"ವನ್ನು ಸ್ವಚ್ಚಗೊಳಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ತೆಲಂಗಾಣದ ಸಾತಿಪಲ್ಲಿ ವಿಧಾನಸಭಾ ಕ್ಷೇತ್ರದ ಟಿಆರ್ ಎಸ್ ಅಭ್ಯರ್ಥಿ, ಹಾಲಿ ಶಾಸಕ ಪಿದಮರ್ತಿ ರವಿ, ತಾನೊಂದು ಘನ ಕಾರ್ಯ ಮಾಡುವಂತೆ ಪಕ್ಷದ ಕಾರ್ಯಕರ್ತರೊಂದಿಗೆ ಕ್ಯಾಮರಾಕ್ಕೆ ಪೋಸು ಕೊಟ್ಟಿದ್ದಾರೆ.
ಇದ್ಯಾವುದರ ಬಗ್ಗೆ ಅರಿವೇ ಇಲ್ಲದೇ, ಸುತ್ತಲೂ ಸೇರಿಕೊಂಡು ಜನರಿಂದ ಗಾಬರಿಗೊಳಗಾದ ಮಗು ಆಳುತ್ತಿದ್ದರೂ ಬಿಡದೆ ಜೈ ತೆಲಂಗಾಣ, ಕಾರಿನ ಗುರುತಿಗೆ ಮತ ಹಾಕಿ ಎಂಬಿತ್ಯಾದಿ ಘೋಷಣೆಗಳನ್ನು ಮೊಳಗಿಸುತ್ತಾ ಕ್ಯಾಮರಾಕ್ಕೆ ಪೋಸ್ ನೀಡಿದ್ದಾರೆ. ಮಗುವಿನ ತಾಯಿ ಮಗುವನ್ನು ಹಿಡಿದುಕೊಂಡಿದ್ದಾರೆ. ಪಿದಮರ್ತಿ ರವಿ ಮಗುವನ್ನು ಶುಚಿಗೊಳಿಸಿದ್ದಾರೆ.