ಕಾಸರಗೋಡು, ನ 30 (MSP): ಮುಳ್ಳು ಹಂದಿ ಹಿಡಿಯಲು ಸುರಂಗದೊಳಗೆ ತೆರಳಿದ್ದ ವ್ಯಕ್ತಿಯೋರ್ವ ಅಲ್ಲೇ ಸಿಲುಕಿ ಮೃತಪಟ್ಟಿರುವ ಘಟನೆ ಕಾಸರಗೋಡಿನ ಧರ್ಮತ್ತಡ್ಕ ಬಾಳಿಗೆಯಲ್ಲಿ ನಡೆದಿದೆ. ನಾರಾಯಣ ನಾಯ್ಕ ಸುರಂಗದೊಳಗೆ ಸಿಲುಕಿಕೊಂಡಾತ.
ನ.೨೯ರ ಗುರುವಾರ ಸಂಜೆ ನಾರಾಯಣ ನಾಯ್ಕ ಅವರು ಮುಳ್ಳು ಹಂದಿ ಬೇಟೆಗೆಂದು ಸುರಂಗವನ್ನು ಪ್ರವೇಶಿಸಿದ್ದಾನೆ. ಇವರು ಕಾಲಿಗೆ ಹಗ್ಗ ಕಟ್ಟಿ ಒಳಗೆ ಹೋಗಿದ್ದಾರೆ ಆದರೆ ಹೊರಬರಲಾಗದೆ ಒಳಗೆ ಸಿಲುಕಿದ್ದಾರೆ . ಬಳಿಕ ಸುರಂಗದೊಳಗೆ ತರಳಲು ಸ್ಥಳೀಯರಿಗೆ ದೈರ್ಯ ಬಂದಿಲ್ಲ. ಈ ಸಂದರ್ಭ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಸುರಂಗದೊಳಗೆ ಸುಮಾರು ೪೦ ಮೀಟರ್ ದೂರದಲ್ಲಿ ಮೃತದೇಹ ಸಿಲುಕಿಕೊಂಡಿದೆ ಎಂದು ಅಂದಾಜಿಸಲಾಗಿದೆ.
ನಿನ್ನೆ ರಾತ್ರಿಯೇ ಉಪ್ಪಳದಿಂದ ಆಗ್ನಿಶಾಮಕ ದಳದ ತಂಡ ಆಗಮಿಸಿ ಶವವನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದು, ಒಳಗೆ ಉಸಿರು ಗಟ್ಟುವ ವಾತಾವರಣವಿದ್ದ ಕಾರಣ ಕಾರ್ಯಾಚರಣೆಗೆ ತಡೆಯಾಗುತ್ತಿದೆ ಎಂದು ತಿಳಿದುಬಂದಿದೆ.