ಬೆಂಗಳೂರು, ನ 29(SM): ಹಲವು ತಿಂಗಳುಗಳಿಂದ ಮುಂದೂಡಲ್ಪಟ್ಟಿದ್ದ ಸಂಪುಟ ವಿಸ್ತರಣೆಗೆ ಕಡೆಗೂ ಕಾಲ ಕೂಡಿ ಬರುವ ಲಕ್ಷಣಗಳು ಗೋಚರಿಸುತ್ತಿದೆ. ಮುಂದಿನ 10-12 ದಿನಗಳಲ್ಲಿ ಸಂಪುಟ ವಿಸ್ತರಣೆ ಪಕ್ಕಾ ಎಂದು ಕಾಂಗ್ರೆಸ್ ಹಿರಿಯ ಮುಖಂಡರಿಂದ ಮಾಹಿತಿ ಲಭ್ಯವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬೆಳಗಾವಿ ಅಧಿವೇಶನಕ್ಕೆ ಮುನ್ನಾ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದಿದ್ದಾರೆ. ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಅಧಿವೇಶನದ ಒಳಗಾಗಿ ಒಂದು ದಿನಾಂಕ ನಿಗದಿಪಡಿಸಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಅದಕ್ಕೂ ಮೊದಲು ಜೆಡಿಎಸ್ ನಾಯಕರೊಂದಿಗೂ ಚರ್ಚೆ ನಡೆಸುತ್ತೇವೆ. ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಪ್ರಮುಖ ವಿಚಾರವೆಂದರೆ, ಸಂಪುಟ ವಿಸ್ತರಣೆಯನ್ನು ಕೂಡಲೇ ಮಾಡಬೇಕು ಹಾಗೂ ತಮಗೆ ಸಚಿವ ಸ್ಥಾನ ನೀಡಬೇಕೆಂದು ಸಚಿವ ಸ್ಥಾನ ಆಕಾಂಕ್ಷಿಗಳು ಕಾಂಗ್ರೆಸ್ ನ ಹಿರಿಯರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಾಗೂ ಸಂಪುಟ ವಿಸ್ತರಣೆಯಾಗದಿದ್ದಲ್ಲಿ ಅಧಿವೇಶನಕ್ಕೆ ಗೈರು ಹಾಜರಾಗುವುದಾಗಿ ಆಕಾಂಕ್ಷಿಗಳು ಕಾಂಗ್ರೆಸ್ ಮುಖಂಡರಿಗೆ ಬೆದರಿಕೆಯೊಡ್ಡಿದ್ದಾರೆ.
ಬೆದರಿಕೆಗೆ ಬಗ್ಗಿದ ರಾಜ್ಯ ಕಾಂಗ್ರೆಸ್ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಮಾಡುವ ನಿರ್ಣಯಕ್ಕೆ ಬಂದಿದ್ದಾರೆ.