ಬೆಂಗಳೂರು, ನ 29(SM): ಸಿನಿಮೀಯ ರೀತಿಯಲ್ಲಿ ಹಂತಕರನ್ನು ಡಿಸಿಪಿ ಅಣ್ಣಾಮಲೈ ತಂಡ ಸೆರೆ ಹಿಡಿದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಂಧಿತರು ಲಾರಿ ಚಾಲಕನನ್ನು ಭೀಕರವಾಗಿ ಕೊಲೆ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣದ ಆರೋಪಿಗಳಾಗಿದ್ದಾರೆ.
ತೌಹೀದ್ ಅಲಿಯಾಸ್ ವರ್ದಾ, ಮುದಸ್ಸಿರ್ ಮತ್ತು ಸಲ್ಮಾನ್ ಬಂಧಿತ ಆರೋಪಿಗಳು. ನವಂಬರ್ 3ರಂದು ರಾತ್ರಿ ತಲಘಟ್ಟಪುರದ 80 ಫೀಟ್ ರಸ್ತೆ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಚಾಲಕ ಭಾಸ್ಕರ್ ಹತ್ಯೆಯಾಗಿದ್ದರು. ಘಟನೆಯ ಕುರಿತಂತೆ ತಲಘಟ್ಟಪುರದಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಬೇಧಿಸಲು ಪೊಲೀಸರು ಲಾರಿ ಚಾಲಕರ ವೇಷತೊಟ್ಟು ರಸ್ತೆಗಿಳಿದಿದ್ದರು. ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಎಸಿಪಿ ಮಹದೇವ್ ನೇತೃತ್ವದಲ್ಲಿ ಇಬ್ಬರು ಇನ್ಸ್ಪೆಕ್ಟರ್ ಗಳು, ಸಿಬ್ಬಂದಿ ಆರೋಪಿಗಳ ಪತ್ತೆಗೆ ಎರಡು ಲಾರಿಗಳನ್ನು ಪಡೆದು ರಾತ್ರಿ ವೇಳೆ ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಿದ್ದರು.
ಲಾರಿಯಲ್ಲಿರುವವರು ಪೊಲೀಸರು ಎಂಬುವುದು ತಿಳಿಯದೆ, ಲಾರಿ ಚಾಲಕರೆಂದೇ ತಿಳಿದ ಆರೋಪಿಗಳು ದರೋಡೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಬೀಸಿದ ಬಲೆಗೆ ಆರೋಪಿಗಳು ಬಿದ್ದಿದ್ದಾರೆ. ತಕ್ಷಣ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭ ಲಾರಿ ಚಾಲಕ ಭಾಸ್ಕರ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.