ಬಂಟ್ವಾಳ, ನ 29(SM): ಬಂಟ್ವಾಳ ನಗರ ಠಾಣಾ ಎಎಸ್ಐ ರಘುರಾಮ ಹೆಗ್ಡೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಕುಖ್ಯಾತಿ ತಂದಿರುವ ಮಂಗಳೂರಿನ ತಣ್ಣೀರುಬಾವಿಯ ತೋಟಬೆಂಗ್ರೆಯಲ್ಲಿ 7 ಮಂದಿಯಿಂದ ನಡೆದಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಎಎಸ್ಐ ರಘುರಾಮ ಹೆಗ್ಡೆ ಅವರನ್ನು ಅಮಾನತುಗೊಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.
ತೋಟಬೆಂಗ್ರೆಯಲ್ಲಿ ನವೆಂಬರ್ 18ರಂದು ನಡೆದಿದ್ದ ಅತ್ಯಾಚಾರ ಪ್ರಕರಣದ ಬಳಿಕ ಸಂತ್ರಸ್ತೆ ಯುವತಿ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ದೂರು ನೀಡಲು ತೆರಳಿದ್ದರು. ನವೆಂಬರ್ ೨೦ರಂದು ಅಲ್ಲಿ ಹಗಲು ದಿನಚರಿ ಕರ್ತವ್ಯದಲ್ಲಿದ್ದ ಎಎಸ್ಐ ರಘುರಾಮ ಹೆಗ್ಡೆ ಅವರು ತಕ್ಷಣ ದೂರನ್ನು ದಾಖಲಿಸಲು ನಿರಾಕರಿಸಿ, ಘಟನೆ ಎಲ್ಲಿ ಸಂಭವಿಸಿದೆಯೋ ಅದೇ ವ್ಯಾಪ್ತಿಯಲ್ಲಿ ಹೋಗಿ ದೂರು ದಾಖಲಿಸುವಂತೆ ಸಂತ್ರಸ್ತೆಯನ್ನು ಹಿಂದಕ್ಕೆ ಕಳುಹಿಸಿದ್ದರು.