ಚಿಕ್ಕಮಗಳೂರು ,ನ 29 (MSP): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜಸ್ಥಾನದ ಪ್ರಸಿದ್ಧ ಪುಷ್ಕರ್ ನಲ್ಲಿನ ಬ್ರಹ್ಮ ದೇವಸ್ಥಾನಕ್ಕೆ ಭೇಟಿ ನೀಡಿರುವ ಸಂದರ್ಭ ದತ್ತಾತ್ರೇಯ ಗೋತ್ರವೆಂದೂ ತಾನು ಕೌಲ ಬ್ರಾಹ್ಮಣ ಎಂದು ಹೇಳಿಕೊಂಡಿರುವ ವಿಚಾರವಾಗಿ ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಬ್ರಾಹ್ಮಣ ಜಾತಿಯ ಸರ್ಟಿಫಿಕೇಟ್ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ನಾವು ಹೆಚ್ಚಾಗಿ ತಂದೆಯ ಜಾತಿ ಆಧಾರಿಸಿ ಜಾತಿ ಪ್ರಮಾಣ ಪತ್ರ ಪಡೆಯುತ್ತೇವೆ. ಭಾರತದಲ್ಲಿ ಅಂತರ ಧರ್ಮೀಯ, ಅಂತರ್ಜಾತಿ ವಿವಾಹವಾಗಿದ್ದರೂ ಸಹ ಅಪ್ಪನ ಜಾತಿಯ ಪ್ರಕಾರವೇ ಜಾತಿ ಪ್ರಮಾಣಪತ್ರ ನೀಡುತ್ತಾರೆ. ರಾಹುಲ್ ಗಾಂಧಿ ಹೆಸರು ಚರ್ಚ್ ನಲ್ಲಿ ಸೇರ್ಪಡೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ ರಾಹುಲ್ ಅವರಿಗೆ ಬ್ರಾಹ್ಮಣ ಜಾತಿ ಪ್ರಮಾಣ ಪತ್ರ ಸಿಕ್ಕಿದ್ದು ಯಾವಾಗ ಎಂದು ಶೋಭಾ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರ ಈ ಹೇಳಿಕೆ ಕೇವಲ ಮತಗಳಿಸುವುದು ಮಾತ್ರ. ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಾಗಿ ಬ್ರಾಹ್ಮಣ ಸಮುದಾಯದ ಮತ ಸೆಳೆಯುವ ದೃಷ್ಟಿಯಿಂದ ಸುಳ್ಳು ಹೇಳುತ್ತಿದ್ದಾರೆ. ಒಬ್ಬ ರಾಷ್ಟ್ರೀಯ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಈ ರೀತಿ ಸುಳ್ಳು
ಹೇಳಿಕೊಂಡು ಓಡಾಡುವುದು ಎಷ್ಟು ಸರಿ ಎಂದು ಶೋಭಾ ಪ್ರಶ್ನಿಸಿದ್ದಾರೆ.