ಮಂಗಳೂರು, ಡಿ.18 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಐದು ಒಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.
ಶಿಕ್ಷಣ ಸಂಸ್ಥೆಯಲ್ಲಿನ ಕ್ಲಸ್ಟರ್ 1ರಲ್ಲಿ 14 ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ನಾಲ್ವರಿಗೆ ಓಮಿಕ್ರಾನ್ ದೃಢಪಟ್ಟಿದ್ದು, ಮತ್ತೊಂದು ಶಿಕ್ಷಣ ಸಂಸ್ಥೆಯ ಕ್ಲಸ್ಟರ್ 2ರಲ್ಲಿನ 19 ಕೊರೊನಾ ಸೋಂಕಿತರಲ್ಲಿ ಒಬ್ಬರಿಗೆ ರೂಪಾಂತರಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ.
ಈ ಕುರಿತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾಹಿತಿ ನೀಡಿದ್ದು, ಮೊದಲ ಕ್ಲಸ್ಟರ್ ನಲ್ಲಿ 16 ಕೊರೊನಾ ಪ್ರಕರಣಗಳು ವರದಿಯಾಗಿದ್ದವು, ಜಿನೋಮಿಕ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10 ರಂದು ಕಳುಹಿಸಲಾಗಿತ್ತು, ಶನಿವಾರ ನಾಲ್ವರಿಗೆ ಒಮಿಕ್ರಾನ್ ಪಾಸಿಟಿವ್ ಎಂದು ಉಲ್ಲೇಖಿಸಿದ ವರದಿಯನ್ನು ಸ್ವೀಕರಿಸಲಾಗಿದ್ದು, ಇಂದು ಎಲ್ಲಾ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ" ಎಂದರು.
ಇನ್ನು ನರ್ಸಿಂಗ್ ಕಾಲೇಜಿನಿಂದ ಡಿಸೆಂಬರ್ 9 ರಂದು ವರದಿಯಾದ ಮತ್ತೊಂದು ಕ್ಲಸ್ಟರ್ ನಲ್ಲಿ 19 ಪ್ರಕರಣಗಳು ವರದಿಯಾಗಿದ್ದು, ಜೀನೋಮಿಕ್ ಪರೀಕ್ಷೆಗಾಗಿ ಮಾದರಿಗಳನ್ನು ಡಿಸೆಂಬರ್ 10 ರಂದು ಕಳುಹಿಸಲಾಗಿತ್ತು, ಆ ಪೈಕಿ 1 ವಿದ್ಯಾರ್ಥಿನಿಗೆ ದೃಢಪಟ್ಟಿದ್ದು, ಆಕೆಯೂ ಆರೋಗ್ಯವಾಗಿದ್ದಾಳೆ. ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚುವಿಕೆಯ ಪ್ರಕಾರ ಯಾರಿಗೂ ವಿದೇಶ ಪ್ರಯಾಣದ ಇತಿಹಾಸವಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.