ಮಂಗಳೂರು,ನ 29 (MSP): ಹಿರಿಯ ಪತ್ರಕರ್ತ, ಸಮಾಜವಾದಿ ಹೋರಾಟಗಾರ ಅಮ್ಮೆಂಬಳ ಆನಂದ (92) ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಪತ್ರಕರ್ತ, ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಅಮ್ಮೆಂಬಳ ಆನಂದ ಅವರು ಚಿನ್ನಯ ಹಾಗೂ ತಿರುಮಲೆ ದಂಪತಿಯ ಪುತ್ರರಾಗಿರುವ ದಕ್ಷಿಣ ಕನ್ನಡಯ ಬಂಟಾಳ್ವ ತಾಲೂಕಿನ ಅಮ್ಮೆಂಬಳದಲ್ಲಿ 1927ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬಿಜೈಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪೂರೈಸಿದ ಇವರು, ಕಂಕನಾಡಿಯಲ್ಲಿದ್ದ ಭತ್ತ ಸಂಶೋಧನಾ ಕೇಂದ್ರದಲ್ಲಿ ಕ್ಷೇತ್ರ ಸಹಾಯಕ ರಾಗಿ ಮತ್ತು ಬೆಸೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಕೆಲಕಾಲ ಉದ್ಯೋಗದಲ್ಲಿದ್ದರು.
ಪತ್ರಕರ್ತರಾದ ಬಳಿಕ ಕಾರ್ಯಕ್ಷೇತ್ರಕ್ಕಾಗಿ ಆಯ್ದುಕೊಂಡದ್ದು ಉ.ಕ. ಜಿಲ್ಲೆಯ ಅಂಕೋಲಾ, ನಿವೃತ್ತ ಜೀವನ ಉಡುಪಿ ಜಿಲ್ಲೆಯಲ್ಲಿ. ಹೀಗೆ 3 ಜಿಲ್ಲೆಗಳ ಒಡನಾಟ ಹೊಂದಿರುವ ಅಮ್ಮೆಂಬಳ ಅವರು, ಹಿರಿಯ ಸಮಾಜವಾದಿ ನೇತಾರರಾದ ಕಮಲಾದೇವಿ ಚಟ್ಟೋಪಾಧ್ಯಾಯ, ದಿನಕರ ದೇಸಾಯಿ, ಅಮ್ಮೆಂಬಳ ಬಾಳಪ್ಪ, ಜಾರ್ಜ ಫೆರ್ನಾಂಡಿಸ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಡಾ. ದಿನಕರ ದೇಸಾಯಿ ಅವರ ಕರೆಯಂತೆ ಸಪತ್ನೀಕರಾಗಿ ಉ.ಕ. ಜಿಲ್ಲೆಯ ಅಂಕೋಲಾಕ್ಕೆ ತೆರಳಿ ಕೆನರಾ ವೆಲ್ಫೇರ್ ಟ್ರಸ್ಟ್ ವಾರಪತ್ರಿಕೆ ಜನಸೇವಕ ಸಂಪಾದಕರಾಗಿ 17 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಡೆಕ್ಕನ್ ಹೆರಾಲ್ಡ್ , ಪ್ರಜಾವಾಣಿ ಪತ್ರಿಕೆಯಲ್ಲಿ 30 ವರ್ಷ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ 35 ವರ್ಷ ಕಾರ್ಯನಿರ್ವಹಿಸಿದ್ದು, ನಿವೃತ್ತಿ ಬಳಿಕ ಮಣಿಪಾಲದಲ್ಲಿ ಮಗಳ ಮನೆಯಲ್ಲಿ ಜೀವನದ ಸಂಧ್ಯಾ ಕಾಲವನ್ನು ಕಳೆಯುತ್ತಿದ್ದಾರೆ.
ಇವರಿಗೆ 1987ರ ಕರ್ನಾಟಕ ಪತ್ರಿಕಾ ಅಕಾಡೆಮಿ, 1996ರ ಖಾದ್ರಿ ಶಾಮಣ್ಣ ನೆನಪಿನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ