ಉಡುಪಿ, 29 (MSP): ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿಯನ್ನು ಪೋಲಿಸರು ಮಂಗಳವಾರ ತಡ ರಾತ್ರಿ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಆರೋಪಿಯು ಬಾಲಕನನ್ನು ನ.10ರಂದು ಕಪ್ಪಾಡಿ, ಮೂರುರು ಕಡೆಯ ಕಾಡಿಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದ . ಇಷ್ಟಕ್ಕೆ ಸುಮ್ಮನಾಗದ ಆರೋಪಿಯೂ ಬಳಿಕವೂ ಸುಮಾರು 3-4 ಬಾರಿ ಪುನಾರಾವರ್ತಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಾಲಕನು ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಭಯಬೀತನಂತೆ ವರ್ತಿಸುತ್ತಾ ಎಲ್ಲೂ ಹೋಗದೆ ಮನೆಯಲ್ಲೇ ಉಳಿದಿದ್ದ. ಮನೆಯವರು ಆತಂಕಗೊಂಡು ಆಸ್ಪತ್ರೆಗೆ ಕೊಂಡೊಯ್ದಾಗ ಅಲ್ಲಿ ಮಾನಸಿಕ ತಜ್ಞರು ವಿಚಾರಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂತು. ಬಳಿಕ ಆತನನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
5-6 ವರ್ಷಗಳಿಂದ ಈ ರೀತಿಯ ಚಟ ಹೊಂದಿದ್ದ ಈತ 10ಕ್ಕೂ ಅಧಿಕ ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ದೌರ್ಜನ್ಯ ಎಸಗಿದ್ದ ಎಂದು ತನಿಖೆ ಯಿಂದ ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ಕುಂದಾಪುರದ ಹೆಮ್ಮಾಡಿಯಲ್ಲಿ ದಿನ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ಈತನಿಗೆ ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಮಗು ಇದೆ. ಬಾಲಕ ತಂದೆ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಧಿತ ಆರೋಪಿಯನ್ನು ಗುರುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಎಸ್.ಪಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.