ಉಪ್ಪಿನಂಗಡಿ, ಡಿ 13 (DaijiworldNews/MS): ಅಕ್ರಮ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕಾವಲ್ಕಟ್ಟೆ ಮನೆ ನಿವಾಸಿ ಅಬ್ದುಲ್ ರಹಿಮಾನ್ ಬಿನ್ ಇಬ್ರಾಹಿಂ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿಯಲ್ಲಿನ ತನ್ನ ಗುಜುರಿ ವಸ್ತುಗಳ ಅಂಗಡಿಯ ಬಳಿ ತನ್ನ ಪರಿಚಯದ ಶಹನಾಝ್ ಎಂಬ ಮಹಿಳೆಯೊಂದಿಗೆ ಮಾತನಾಡುತ್ತಿದ್ದಾಗ ತನ್ನ ಪತ್ನಿ ಹಸೀನಾ ಹಾಗೂ ಚಾಲಕ ಆಫ್ರೀದ್ ಬಂದು ತನಗೆ ಹಾಗೂ ಮಹಿಳೆಗೆ ಸಂಬಂಧ ಕಲ್ಪಿಸಿ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ಮುಸ್ಲಿಂ ಮಹಿಳೆಗೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಾವಳಿ ಎಲ್ಲೆಡೆ ವೈರಲ್ ಆಗಿದ್ದರೂ ಪೊಲೀಸರು ಯಾಕೆ ಸುಮೊಟೋ ಪ್ರಕರಣ ದಾಖಲಿಸಲಿಲ್ಲ, ಹಲ್ಲೆಯ ದೃಶ್ಯಾವಳಿ ಇಬ್ಬರು ಮಹಿಳೆಯರು ಕಾಣಿಸಿಕೊಂಡಿದ್ದಾರೆ. ಆದರೆ ದೂರುದಾರರು ಇಬ್ಬರ ವಿರುದ್ದ ಮಾತ್ರ ಪ್ರಕರಣ ದಾಖಲು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.