ಮಂಗಳೂರು, ನ 28(MSP): ಸ್ಥಗಿತಗೊಂಡಿರುವ ಅಡ್ಡಹೊಳೆಯಿಂದ ಬಿ.ಸಿ.ರೋಡ್ವರೆಗಿನ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪತ ಕಾಮಗಾರಿ ಶೀಘ್ರ ಮುಗಿಸದಿದ್ದರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಡ್ಡಹೊಳೆಯಿಂದ ಮಂಗಳೂರು ತನಕ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಷ್ಟ್ರೀಯ ಹೆದ್ದಾರಿ 75 ಮಂಗಳೂರು– ಬೆಂಗಳೂರು ನಡುವಿನ ಸಂಪರ್ಕದ ಕೊಂಡಿಯಾಗಿದೆ. ಇಅಟಸ್ಥವಾಗಿರುವ ಕಾಮಗಾರಿ ಸಮಸ್ಯೆಯನ್ನು ಪರಿಹರಿಸಿಬೇಕಾದ ಜವಬ್ದಾರಿ ಕೇಂದ್ರ ಸರ್ಕಾರ ಮತ್ತು ಜಿಲ್ಲೆಯ ಸಂಸದರ ಮೇಲಿದೆ. ಕಾಮಗಾರಿ ಆರಂಭಿಸಲು ಇನ್ನು ಸ್ವಲ್ಪ ದಿನ ಗಳ ಕಾಲ ಕಾಲಾವಕಾಶ ನೀಡುತ್ತೇವೆ. ಒಂದು ವೇಳೆ ಕೆಲವೇ ದಿನಗಳೊಳಗೆ ಕಾಮಗಾರಿ ತ್ವರಿತಗೊಳಿಸದಿದ್ದರೆ ಪಾದಯಾತ್ರೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ಅಡ್ಡಹೊಳೆ - ಬಿ.ಸಿ ರೋಡ್ ರಾಷ್ಟೀಯ ಹೆದ್ದಾರಿ ಚತುಷ್ಪದ ಈ ರಸ್ತೆಯ ಅಭಿವೃದ್ಧಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿತ್ತು.ಅಲ್ಲದೆ ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿತ್ತು. 36 ಹೆಕ್ಟೇರ್ ಅರಣ್ಯ ಜಮೀನನ್ನೂ ಇದಕ್ಕಾಗಿ ಬಿಡುಗಡೆ ಮಾಡಲಾಗಿತ್ತು.ಇದನ್ನು ಗುತ್ತಿಗೆದಾರರಾಗಿರುವ ಎಲ್ ಅಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ,ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರ ಕಂಪನಿಯ ನಡುವಿನ ಸಮಸ್ಯೆಯಿಂದ ಕೆಲಸ ಅರ್ಧಕ್ಕೆ ನಿಂತಿದೆ ಎಂದು ದೂರಿದರು.
ಸಮಸ್ಯೆಗೆ ಪರಿಹಾರದ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದ್ದು ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದ ಜವಾಬ್ದಾರಿ ಇಲ್ಲಿನ ಸಂಸದರ ಹೆಗಲ ಮೇಲಿದೆ . ಆದರೆ, ಅವರು ಎಲ್ಲದಕ್ಕೂ ರಾಜ್ಯ ಸರ್ಕಾರವೇ ಹೊಣೆ ಎನ್ನುತ್ತಾರೆ. ಸಂಸದರು ಈ ರೀತಿ ಸುಳ್ಳು ಹೇಳುತ್ತಾ ದಾರಿ ತಪ್ಪಿಸುವ ಕೆಲಸ ಮಾಡುವುದು, ಜನರಿಗೆ ತಿಳಿದಿದೆ. ರಾಜಕೀಯಕ್ಕಾಗಿ ಸುಳ್ಳು ಹೇಳಿ ಜಿಲ್ಲೆಯ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ’ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ಕುಮಾರ್, ಕೆಪಿಸಿಸಿ ಕಾರ್ಯದ ರ್ಶಿಗಳಾದ ಮಮತಾ ಗಟ್ಟಿ, ನವೀನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಶಶಿಧರ ಹೆಗ್ಡೆ, ಅಪ್ಪಿ, ಸದಾಶಿವ ಉಳ್ಳಾಲ್, ಆರ್.ಕೆ.ಪೃಥ್ವಿರಾಜ್, ನಝೀರ್ ಬಜಾಲ್, ಮಿಥುನ್ ರೈ, ನಿತ್ಯಾನಂದ ಶೆಟ್ಟಿ, ಪ್ರೇಮ್ ಬಲ್ಲಾಳ್ಬಾಗ್ ಮುಂತಾದವರಿದ್ದರು.