ಬೆಂಗಳೂರು, ನ 28(MSP): ಅರ್ಮೇನಿಯಕ್ಕೆ ತೆರಳಲು ಮುಂದಾದ 31 ಮಹಿಳೆಯರು, ಓರ್ವ ಪುರುಷ ಸಹಿತ 32 ಜನರನ್ನು ಅನುಮಾನದ ಮೇರೆಗೆ ಕೆಂಪೇಗೌಡ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಪೊಲೀಸರಿಗೊಪ್ಪಿಸಿದ್ದಾರೆ.
ಮಾನವ ಕಳ್ಳಸಾಗಾಣಿಕೆ ಶಂಕೆ ಮೇಲೆ ಇಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ತಾವು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡಿದ್ದು, ಅರ್ಮೇನಿಯಾ ಕಾಲೇಜಿನಲ್ಲಿ ಜರ್ಮನ್ ಭಾಷೆ ಕಲಿಯುವ 2 ತಿಂಗಳ ಕೋರ್ಸ್ ಗಾಗಿ ತೆರಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ ಅಂಥ ಯಾವುದೇ ಕಾಲೇಜು ಅರ್ಮೇಮಿಯಾದಲಿಲ್ಲ ಎನ್ನುವುದು ಪರಿಶೀಲನೆ ವೇಳೆ ತಿಳಿದುಬಂತು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ವಿಮಾನ ನಿಲ್ದಾಣ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಇವರ ಪಾಸ್ ಪೋರ್ಟ್ ಮತ್ತು ವೀಸಾ ಸರಿಯಾಗಿದೆ. ಎಲ್ಲರೂ ಕೇರಳ ಮತ್ತು ಮಂಗಳೂರು ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದು, ಪಾಲಕರಿಗೆ ಮಾಹಿತಿ ನೀಡಿ ಬಿಟ್ಟು ಕಳುಹಿಸಿದ್ದೇವೆ. ಕೇರಳ ಮೂಲದ ಟೋನಿ ಎಂಬ ವ್ಯಕ್ತಿ ಅರ್ಮೇನಿಯಾ ದೇಶಕ್ಕೆ ಕರೆದೊಯ್ಯುತ್ತಿದ್ದ. ಆತ ಗೊಂದಲ ಕಾರಿ ಹೇಳಿಕೆ ನೀಡಿದ್ದಾನೆ ಪ್ರಕರಣ ದಾಖಲಿಸಿಕೊಂಡು ಟೋನಿಯನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.