ಕಾಪು, ಡಿ.12 (DaijiworldNews/PY): ಒಬ್ಬಂಟಿ ಮಹಿಳೆ ವಾಸವಿದ್ದ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣ ಭೇದಿಸಿರುವ ಕಾಪು ಪೊಲೀಸರು ಮನೆಕೆಲಸದಾಕೆಯನ್ನು ಬಂಧಿಸಿ ಆಕೆಯಿಂದ 103 ಗ್ರಾಂ ತೂಕದಷ್ಟು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತೆಯನ್ನು ಸುಭಾಸ್ನಗರ ನಿವಾಸಿ ಅನಿತಾ (39) ಎಂದು ಗುರುತಿಸಲಾಗಿದೆ.
ಅನಿತಾ ಕಟಪಾಡಿ ಅಚ್ಚಡ ಹೌಸ್ನ ಜೋಸ್ ಫಿನ್ ಲೋಬೋ ಅವರ ಮನೆಯ ಕಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕದ್ದಿದ್ದಳು.
ಒಬ್ಬಂಟಿಯಾಗಿದ್ದ ಜೋಸ್ ಫಿನ್ ಲೋಬೋ ಮನೆಯಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ ಅನಿತಾ, ಅಜ್ಜಿಯ ಚಲನವಲಗಳನ್ನು ಗಮನಿಸಿ ಅವರು ಬೇರೆ ಕಡೆಯಲ್ಲಿದ್ದಾಗ ಮನೆಯಲ್ಲಿದ್ದ ಕಪಾಟಿನ ಕೀಯನ್ನು ತೆಗೆದು, ಬಳಿಕ ಚಿನ್ನಾಭರಣ ಕದ್ದಿದ್ದಳು.
ಸೆ.8ರಿಂದ ಅ.25ರ ನಡುವೆ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ತನ್ನ ಮಕ್ಕಳಿಗೆ ವಿಷಯ ತಿಳಿಸಿ ಮನೆಯಲ್ಲಿ ಹುಡುಕಾಡಿದ ನಂತರ ಜೋಸ್ ಫಿನ್ ಲೋಬೋ ಅವರು ಡಿ.9ರಂದು ಕಾಪು ಪೊಲೀಸರಿಗೆ ದೂರು ನೀಡಿದ್ದರು. ದೂರಿನಂತೆ ಪ್ರಕರಣ ದಾಖಲಿಸಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ಮನೆಕೆಲಸದಾಕೆಯೇ ಕಳ್ಳಿ ಎನ್ನುವುದು ಪತ್ತೆಯಾಗಿತ್ತು.
ಉಡುಪಿ ಎಸ್ಪಿ ವಿಷ್ಣುವರ್ಧನ್, ಎಡಿಷನಲ್ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿಜಯಪ್ರಸಾದ್, ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಅವರ ನಿರ್ದೇಶನದಂತೆ ಕಾಪು ಎಸ್ಐ ರಾಘವೇಂದ್ರ ಸಿ ಹಾಗೂ ಕ್ರೈಂ ಎಸ್ಐ ತಿಮ್ಮೇಶ್ ಅವರ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದು, ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.