ಕಾಸರಗೋಡು, ಡಿ.11 (DaijiworldNews/HR): ಸಾಮಾಜಿಕ ಜಾಲ ತಾಣಗಳಲ್ಲಿ ಪರಿಚಯವಾದ 16 ರ ಬಾಲಕಿಗೆ ಬೆದರಿಸಿ ಹತ್ತು ಲಕ್ಷ ರೂ.ಗೆ ಬೇಡಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ವಿದ್ಯಾರ್ಥಿ ಮಂಡ್ಯದ ಬಿ.ಆರ್ ರಾಕೇಶ್ (21) ಬಂಧಿತ ವಿದ್ಯಾರ್ಥಿ.
ಬಾಲಕಿಯ ಫೋಟೋವನ್ನು ಬಹಿರಂಗ ಪಡಿಸುವುದಾಗಿ ಬೆದರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಕಾಸರಗೋಡು ನಗರ ಠಾಣಾ ವ್ಯಾಪ್ತಿಯ ಬಾಲಕಿಯ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮೈಸೂರಿಂದ ಆರೋಪಿಯನ್ನು ಬಂಧಿಸಿದ್ದಾರೆ.
ಈತನ ವಿರುದ್ಧ ಐ.ಟಿ, ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.