ಬಂಟ್ವಾಳ, ನ 27(SM): ಪಂಚಾಯತ್ ಅಧ್ಯಕ್ಷರುಗಳು ಮತ್ತು ಅಧಿಕಾರಿಗಳ ಜೊತೆ ಸಂವಹನ ಕೊರತೆಯನ್ನು ನೀಗಿಸಲು ತಹಶೀಲ್ದಾರ ಕ್ರಮಕೈಗೊಳ್ಳಿ ಎಂದು ಶಾಸಕ ರಾಜೇಶ್ ನಾಯಕ್ ತಿಳಿಸಿದರು. ಅವರು ಬಿ.ಸಿ.ರೋಡಿನ ಎಸ್.ಜಿ.ಆರ್.ಎಸ್.ವೈ. ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಗ್ರಾ.ಪಂ.ಅಧ್ಯಕ್ಷರುಗಳ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆಯಾದರೆ ಅಲ್ಲಿನ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಅಧಿಕಾರಿಗಳು ಗ್ರಾ.ಪಂ. ಜನಪ್ರತಿನಿಧಿಗಳೊಂದಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಲಿಖಿತವಾಗಿ ಮೇಲಾಧಿಕಾರಿಗಳಿಗೆ ದೂರು ನೀಡಲು ಸೂಚಿಸಿದರು. ಜನರ ಸಮಸ್ಯೆಗಳು ಪರಿಹಾರವಾಗಬೇಕು. ಅಧಿಕಾರಿಗಳು ಉದಾಸೀನ ಮನೋಭಾವದಿಂದ ಹೊರಬರಬೇಕು ಎಂದು ಅವರು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ವಸತಿನಿವೇಶನ ಹಾಗೂ ಸ್ಮಶಾನಕ್ಕೆ ಜಮೀನು ಮೀಸಲಿಡಬೇಕು ಎಂದು ಶಾಸಕರು ತಿಳಿಸಿದರು. ಯಾವ ಪಂಚಾಯತ್ ಗಳಲ್ಲಿ ಸಮಸ್ಯೆಗಳಿದೆ ಅಂತಹ ಪಂಚಾಯತ್ ಗಳ ಜೊತೆ ಅಧಿಕಾರಿಗಳು ಹೊಂದಾಣಿಕೆ ಮಾಡಿ ಸಮಸ್ಯೆಗಳ ಸರ್ವೆ ಕಾರ್ಯ ಶೀಘ್ರವಾಗಿ ನಡೆಸಿ ಪರಿಹಾರಕ್ಕೆ ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಕನಿಷ್ಠ ಮೂರು ತಿಂಗಳಲ್ಲಿ ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಕೆಲಸಗಳನ್ನು ಮಾಡಿ ಮುಗಿಸಿ ಎಂದು ಡೆಡ್ ಲೈನ್ ನೀಡಿದರು.