ತಿರುವನಂತಪುರಂ, ನ 27(SM): ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳಲು ಯತ್ನಿಸಿ ವಿಫಲರಾಗಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದಲ್ಲದೆ, ಅಯ್ಯಪ್ಪ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾರನ್ನು ಪಥನಂಥಿಟ್ಟ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಅಯ್ಯಪ್ಪ ದೇಗುಲದ ಬಗ್ಗೆ ಹಾಗೂ ಭಕ್ತರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ಆರೋಪ ರೆಹನಾ ಮೇಲಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೊಚ್ಚಿಯಲ್ಲಿ ರೆಹನಾರನ್ನು ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಅಕ್ಟೋಬರ್ 22ರಂದು ಪಥನಂಥಿಟ್ಟ ಪೊಲೀಸರು, ರೆಹನಾ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ರೆಹನಾ ಅವರು ಫೇಸ್ ಬುಕ್ ನಲ್ಲಿ ಬಳಸಿದ ಭಾಷೆ, ಚಿತ್ರಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಅಯ್ಯಪ್ಪ ಮಾಲೆಧಾರಿಯಂತೆ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆ ಹಾಕಿಕೊಂಡು ಫೋಟೋ ಕ್ಲಿಕಿಸಿ ಫೇಸ್ ಬುಕ್ ನಲ್ಲಿ ಅಪ್ಲೊಡ್ ಮಾಡಿದ್ದಲ್ಲದೆ, ತತ್ತ್ವಮಸಿ ಎಂಬುವುದಾಗಿ ಬರೆದುಕೊಂಡಿದ್ದರು. ರೆಹನಾ ಅವರು ಪೋಸ್ಟ್ ಗಳ ವಿರುದ್ಧ ಶಬರಿಮಲೆ ಸಂರಕ್ಷಣಾ ಸಮಿತಿ ದೂರು ನೀಡಿತ್ತು. ಐಪಿಎಸ್ ಸೆಕ್ಷನ್ 295 ಎ ಅನ್ವಯ ಪ್ರಕರಣ ದಾಖಲಾಗಿತ್ತು.
ಇನ್ನು ಇಂದು ಬಂಧಿತರಾಗಿರುವ ಫಾತಿಮಾ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದರು. ಆದರೆ ರೆಹನಾ ಅವರಿಗೆ ಹಿನ್ನಡೆಯುಂಟಾಗಿದ್ದು, ನವೆಂಬರ್ 16ರಂದು ಅವರ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು.