ಮಂಗಳೂರು, ಡಿ.10 (DaijiworldNews/HR): ರಾಜ್ಯ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.
ಸಂಸದ ನಳಿನ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಮನಪಾ ಸದಸ್ಯರು ಇಂದು ಬೆಳಗ್ಗೆ 9.30ರ ಸುಮಾರಿಗೆ ಮನಪಾ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಮತದಾನ ಪ್ರಗತಿಯಲ್ಲಿದ್ದು, ಮತದಾನ ಕೇಂದ್ರದಲ್ಲಿ ಎಲ್ಲ ಮತದಾರರು ಸಾಮಾಜಿಕ ಅಂತರ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ ಮತದಾನಕ್ಕೆ ಸರತಿ ಸಾಲಿನಲ್ಲಿ ಮತದಾರರು ನಿಂತಿದ್ದಾರೆ. ಮನಪಾದಲ್ಲಿ 68 ಮತದಾರರಿದ್ದು, ನಾಲ್ಕು ಮಂದಿ ನಾಮನಿರ್ದೇಶಿತ ಸದಸ್ಯರು, ಇಬ್ಬರು ಶಾಸಕರು, ಓರ್ವ ಸಂಸದ ಕೂಡ ಸೇರಿದ್ದಾರೆ.
ಇನ್ನು ನೀರು ಮಾರ್ಗ ಗ್ರಾಮ ಪಂಚಾಯತ್ನಲ್ಲಿ ಒಟ್ಟು 29 ಮತದಾರರಿದ್ದು, 28 ಮಂದಿ ಬೆಳಿಗ್ಗೆ 10ರ ಹೊತ್ತಿಗೆ ಮತ ಚಲಾಯಿಸಿದ್ದು, ಅವರಲ್ಲಿ13 ಪುರುಷ ಹಾಗೂ 15 ಮಹಿಳಾ ಮತದಾರರು ಇದ್ದಾರೆ.
ಮತದಾನ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್, ರಾಜ್ಯದಲ್ಲಿ 25 ವಿಧಾನಪರಿಷತ್ಗಳ ಚುನಾವಣೆ ನಡೆಯುತ್ತಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿಧಾನ ಪರಿಷತ್ತು ಚುನಾವಣೆಗೆ ಎಲ್ಲಾ ಶಾಸಕರು, ಮನಪಾ ಸದಸ್ಯರು ಮತದಾನ ಮಾಡಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು 4ನೇ ಬಾರಿಗೆ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯದಲ್ಲಿ 25 ಸ್ಥಾನಗಳಲ್ಲಿ 20 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, ಅದರಲ್ಲಿ ಅತೀ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವನು ಸಾಧಿಸಲಿದೆ. ಕಳೆದ ಬಾರಿ 6 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಈ ಬಾರಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ವಿಧಾನ ಪರಿಷತ್ತಿನಲ್ಲಿಯೂ ದಾಖಲೆಯ ಗೆಲುವು ನಮ್ಮದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.