ಶಿವಮೊಗ್ಗ, ನ 27(MSP): ಇಲ್ಲಿನ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಆವರಣದಲ್ಲಿ ನ.26 ರ ಸೋಮವಾರ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ಎಸ್ಎಂಎಸ್ಎಸ್ಎಸ್) 30ನೇ ಹಾಗೂ ಸ್ತ್ರೀಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ 5ನೇ ವಾರ್ಷಿಕೋತ್ಸವ ಸಮಾರಂಭ ಜರಗಿತು. ಈ ಕಾರ್ಯಕ್ರಮವನ್ನು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಇದೇ ವೇಳೆ ಎಸ್ಎಂಎಸ್ಎಸ್ಎಸ್ ಕೊಡ ಮಾಡುವ ’ಚೈತನ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ’ ಯನ್ನು ಪ್ರಧಾನ ಮಾಡಲಾಯಿತು. ಸಾಮಾಜಿಕ ನ್ಯಾಯ, ಸಾಮುದಾಯಿಕ ಸಾಮರಸ್ಯ ಮತ್ತು ಮಾನವ ಹಕ್ಕುಗಳ ಪ್ರಚಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಹಿಂದೆ ಈ ಪ್ರಶಸ್ತಿಯನ್ನು , ನರ್ಮದಾ ಬಚಾವೋ ಆಂದೋಲನ- ಮೇಧಾ ಪಾಟ್ಕರ್, ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೀಡಲಾಗಿತ್ತು.
ಈ ವರ್ಷದ "ಚೈತನ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ" ಯನ್ನು ಅನಿವಾಸಿ ಭಾರತೀಯ ಉದ್ಯಮಿ, ಕೊಡುಗೈ ದಾನಿ, ರೊನಾಲ್ಡ್ ಕೊಲಾಸೊ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಜಾತಿ, ಧರ್ಮದಲ್ಲಿ ಹೆಸರಲ್ಲಿ ಸಮಾಜದಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಆ ನಿಟ್ಟಿನಲ್ಲಿ ಕ್ರೈಸ್ತ, ಮುಸ್ಲಿಂ, ಹಿಂದುಗಳು ಸೌಹಾರ್ದಯುತವಾದ ಬಾಳುವೆ ನಡೆಸಬೇಕು ಎಂದರು. ಜೊತೆಗೆ ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರು ನಾಯಕತ್ವ ವಹಿಸಬೇಕು. ಇದರಿಂದ ಕುಟುಂಬದ ಸರ್ವತೋಮುಖ ಏಳಿಗೆ ಸಾಧ್ಯ ಮತ್ತು ಸಮಾಜದಲ್ಲಿರುವ ಅಂಕುಡೊಂಕು ತಿದ್ದಲು ಸಾಧ್ಯವಾಗುತ್ತದೆ. ಜತೆಗೆ ಸ್ಥಳೀಯ ಆಡಳಿತದಲ್ಲಿ ಹೆಚ್ಚು ಮಹಿಳೆಯರು ಹೆಚ್ಚು ಚುನಾಯಿತರಾಗಿ ಸದೃಢ ಸಮಾಜ ಕಟ್ಟುವ ಕೆಲಸದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಸ್ಎಂಎಸ್ಎಸ್ಎಸ್ ಸಂಸ್ಥೆಯ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೋ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಫೆಲಿಕ್ಸ್ ಜೋಸೆಫ್ ನೊರೋನ್ಹ, ಕಾರ್ಯನಿರ್ವಾಹಕ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ, ಪ್ರೆಸಿಲ್ಲಾ ಮಾರ್ಟಿಸ್ ಮತ್ತಿತರರು ಉಪಸ್ಥಿತರಿದ್ದರು.