ಉಡುಪಿ,ನ 27(MSP): ‘ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ 100 ಕೆ.ಜಿ ಚಿನ್ನದ ತಗಡನ್ನು ಹೊದಿಸುವ ಕಾರ್ಯಕ್ಕೆ ಇದೇ 28ರಂದು ಶ್ರೀಕೃಷ್ಣ ಮಠದಲ್ಲಿ ಚಾಲನೆ ನೀಡಲಾಗುವುದು’ ಎಂದು ಪರ್ಯಾಯ ಪಲಿಮಾರು ಶ್ರಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.
ಅವರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಗೋಪುರಕ್ಕೆ ಹೊದಿಸಲಾಗುವ ಚಿನ್ನದ ತಗಡನ್ನು ಮುಂದಿನ ನಾಲ್ಕು ತಿಂಗಳಲ್ಲಿ ಕೃಷ್ಣನಿಗೆ ಸಮರ್ಪಿಸಲಾಗುತ್ತದೆ’ ಎಂದು ತಿಳಿಸಿದರು. ಇದಕ್ಕಾಗಿ ಸುಮಾರು 100 ಕೆ.ಜಿ. ಚಿನ್ನ ಬಳಸಲಾಗುತ್ತಿದ್ದು, 32 ಕೋಟಿ ವೆಚ್ಚದ ಯೋಜನೆ ಇದಾಗಿದೆ. ದ್ವಿತೀಯ ಪರ್ಯಾಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಕೃಷ್ಣಮಠ ಸುವರ್ಣ ಗೋಪುರ ನಿರ್ಮಾಣ ಕೂಡ ಒಂದು. ಇನ್ನು ಗೋಪುರವನ್ನು ಸುವರ್ಣ ತಗಡಿನಲ್ಲಿ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು ಲೇಸರ್ ಮೂಲಕ ಬರೆಸಲಾಗುವುದು. ಇದರೊಂದಿಗೆ 21,600 ಹಂಸಮಂತ್ರವನ್ನು ದಾಖಲಿಸಲಾಗುವುದು ಎಂದು ವಿವರಿಸಿದರು.
ಗರ್ಭಗುಡಿಯಷ್ಟೇ ಪ್ರಾಮುಖ್ಯತೆಯನ್ನು ಗೋಪುರಕ್ಕೂ ನೀಡಲಾಗಿದೆ. ದ್ರಾವಿಡ ವಾಸ್ತು ಶೈಲಿಯಲ್ಲಿ ದೇವಸ್ಥಾನದ ಗೋಪುರವನ್ನು ಚಾವಣಿಯಂತೆ ನಿರ್ಮಿಸುವುದು ವಾಡಿಕೆ. ಈ ನಿಟ್ಟಿನಲ್ಲಿ ಮರ, ಬೆಳ್ಳಿ ಮತ್ತು ಚಿನ್ನದ ತಗಡುಗಳನ್ನು ಬಳಸಿ ಕರಾವಳಿ ಶೈಲಿಯ ಹಂಚಿನ ಆಕೃತಿಯಲ್ಲಿ ಗೋಪುರ ನಿರ್ಮಿಸಲಾಗುವುದು.ಸುವರ್ಣ ಗೋಪುರದ ಕಾಮಗಾರಿಯನ್ನು ಶ್ರೀಕೃಷ್ಣ ಭಕ್ತರಿಗೆ ಕಾಣುವಂತೆ ಶ್ರೀ ಕೃಷ್ಣಮಠದ ಗೋಶಾಲೆಯ ಮುಂದೆ ಯಾಗ ಶಾಲೆ ಸಮೀಪ ನಡೆಸಲಾಗುವುದು . ಬಂಗಾರದ ಕೆಲಸದಲ್ಲಿ ನಿಷ್ಣಾತರಾದ ದೈವಜ್ಞ ಸಮಾಜ ಹಾಗೂ ವಿಶ್ವಕರ್ಮ ಸಮಾಜದ ಕುಶಲಕರ್ಮಿಗಳು ಮರ ಬೆಳ್ಳಿ ಬಂಗಾರದ ಕೆಲಸದ ಮೂಲಕ ಯೋಜನೆ ಸಾಕಾರಗೊಳಿಸಲಿದ್ದಾರೆ ಎಂದು ತಿಳಿಸಿದರು.
ಸುಮಾರು 2,500 ಚದರಡಿಗಳಿಗೆ ಚಿನ್ನದ ಹೊದಿಕೆ ಹಾಕಲಾಗುತ್ತದೆ. ಈಗಾಗಲೇ ಭಕ್ತರಿಂದ ಸುಮಾರು 60 ಕೆ.ಜಿ.ಯಷ್ಟು ಚಿನ್ನ ಸಂಗ್ರಹವಾಗಿದೆ. ಉಳಿದ 45 ಕೆ.ಜಿ. ಚಿನ್ನ ಶೀಘ್ರದಲ್ಲೇ ಸಂಗ್ರಹವಾಗುವ ವಿಶ್ವಾಸವಿದೆ’ ಎಂದರು.