ಮಂಗಳೂರು, ಅ 16 : ಪತ್ರಕರ್ತೆ ಗೌರಿ ಲಂಕೇಶ್ ಆರೋಪಿಗಳ ಶಂಕಿತ ಚಿತ್ರಗಳನ್ನು ಸರ್ಕಾರ ಬಿಡುಗಡೆ ಮಾಡಿದ ಬಳಿಕ, ಚಿತ್ರಗಳು ಇದೀಗ ಹಲವು ಚರ್ಚೆಗೆ ಕಾರಣವಾಗಿದೆ. ರವಿವಾರ ವಷ್ಟೇ ಉಡುಪಿಯಲ್ಲಿ ಧರ್ಮ ಸಂಸತ್ ನ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಗೌರಿ ಹತ್ಯೆಯ ಆರೋಪಿಗಳ ಶಂಕಿತ ಚಿತ್ರಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಒಬ್ಬಾತನ ಹಣೆ ಮೇಲೆ ಕುಂಕುಮವನ್ನು ಚಿತ್ರಿಸುವ ಮೂಲಕ ಆರೋಪಿಗಳು ಹಿಂದೂ ಸಂಘಟನೆಗಳಿಗೆ ಸೇರಿದವರು ಎಂದು ಬಿಂಬಿಸುವ ರಾಜಕೀಯವನ್ನು ಸರ್ಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ. ಆರೋಪಿಸಿದ್ದರು.
ಇದೆಲ್ಲದರ ನಡುವೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ರೇಖಾ ಚಿತ್ರದಲ್ಲಿ ತಿಲಕ ಇಟ್ಟಿರುವ ವ್ಯಕ್ತಿಗೂ ಹಾಗೂ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ ಗೌಡರ ಆಪ್ತ ಸಹಾಯಕ ಪ್ರಭಾಕರ್ ಭಾವಚಿತ್ರಕ್ಕೂ ಸಾಮ್ಯತೆ ಕಾಣುತ್ತಿದ್ದು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.ಶಂಕಿತ ಆರೋಪಿಗಳಲ್ಲಿ ಇರೋ ಚಿತ್ರದಲ್ಲಿರುವ ಕುಂಕುಮಧಾರಿಯ ವ್ಯಕ್ತಿಗೂ ಪ್ರಭಾಕರ್ ಗೂ ಸಾಮ್ಯತೆ ಕಂಡುಬಂದಿದ್ದು ಇದು ಅವರನ್ನು ಪೇಚಿಗೆ ಸಿಲುಕಿಸುವಂತೆ ಮಾಡಿದೆ. ಈ ನಡುವೆ ಪ್ರಭಾಕರ್ಗೆ ಒಂದೇ ಸಮನೆ ಫೋನ್ ಕಾಲ್ ಬರುತ್ತಿದ್ದು, ನಾನವನ್ನಲ್ಲ ಎನ್ನುವ ಉತ್ತರ ನೀಡಿ ಸಾಕಾಗಿದೆ ಎಂದು ಬೇಸರಿಸುತ್ತಾರೆ ಪ್ರಭಾಕರ್. ಇದೆಲ್ಲವನ್ನು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಳ್ಳುವ ಮೂಲಕ ನನಗೂ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.