ಕಾರ್ಕಳ, ನ 07 (DaijiworldNews/MS): ನಗರದ ಹೃದಯ ಭಾಗದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ಪೂಜಾ ಮಹೋತ್ಸವವು ಆರಂಭಗೊಂಡಿದೆ. ಈ ಧಾರ್ಮಿಕ ವಿಧಿವಿಧಾನದಲ್ಲಿ ಸರ್ವ ಧರ್ಮಿಯರೊಳಗೂಡಿ ಭಕ್ತಿ-ಸಂಭ್ರಮದೊಂದಿಗೆ ಆಚರಿಸುತ್ತಿರುವುದು ವಿಶೇಷವಾಗಿದೆ.
ಡಿಸೆಂಬರ್ 7ರ ಬೆಳಗ್ಗಿನ (ಇಂದು) ಜಾವದಲ್ಲಿ ಆಳೆತ್ತರದ ಮಾರಿಯಮ್ಮನ ವಿಗ್ರಹವನ್ನು ಮೂರು ಮಾರ್ಗ ಪರಿಸರದ ಕಾರಣಿಕ ದೇವರ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲಾಯಿತು. ರಾತ್ರಿ ಹೊತ್ತಿಗೆ ದೇವರ ವಿಗ್ರಹವು ಮಾರಿಯಮ್ಮನ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಹೊತ್ತು ತರಲಾಗುತ್ತದೆ.
ಮಾರಿಯಮ್ಮ ದೇವಳ ಹಾಗೂ ಇತಿಹಾಸ
ಇಕ್ಕೇರಿ ನಾಯಕನ ಕಾಲಘಟ್ಟದಲ್ಲಿ ಕೋಟೆ ಎಲ್ಲಿಲ್ಲಿ ನಿರ್ಮಿಸಲಾಗಿತ್ತೋ ಅದರ ಆಸುಪಾಸಿನಲ್ಲಿ ಹನುಮಂತ, ಮಾರಿಯಮ್ಮ ದೇವಸ್ಥಾನಗಳನ್ನು ನಿರ್ಮಿಸಲಾಗಿತ್ತು.
ಕೋಟೆಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಜನಾಂಗದವರು ಈ ದೇವರ ಆರಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಇಂಬು ನೀಡಿರುವಂತೆ ಕಾರ್ಕಳ ಮಾರಿಯಮ್ಮ ದೇವಸ್ಥಾನದ ಪ್ರಮುಖ ಆಡಳಿತವು ಇಂದಿಗೂ ರಾಮಕ್ಷತ್ರಿಯ ಜನಾಂಗದ ಹಿಡಿತದಲ್ಲಿ ಇರುವುದು ಗಮನಾರ್ಹವಾಗಿದೆ.