ಹಾಸನ, ನ 26(SM): ಮಂಡ್ಯದ ಕನಗನಮರಡಿಯಲ್ಲಿ ಹಳ್ಳಕ್ಕೆ ಬಸ್ ಬಿದ್ದು ೩೦ ಮಂದಿ ದಾರುಣ ಸಾವನ್ನಪ್ಪಿದ ಘಟನೆ ಮರೆಯುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಹಾಸನದಲ್ಲಿ ನಡೆದಿದ್ದು, ಬಾರೀ ಅನಾಹುತವೊಂದು ತಪ್ಪಿದೆ. ಬೈಕ್ ತಪ್ಪಿಸಲು ಹೋಗಿ ಖಾಸಗಿ ಬಸ್ಸೊಂದು ಗದ್ದೆಗೆ ಉರುಳಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಹುಳ್ಳೇನಹಳ್ಳಿ ಬಳಿ ನಡೆದಿದೆ.
ಕೊಡಗು ಜಿಲ್ಲೆಯ ಗದ್ದೆಹೊಸೂರು ಗ್ರಾಮದಿಂದ ಸಂಬಂಧಿಗಳು ಹಾಸನ ಜಿಲ್ಲೆಯ ಗೊರೂರು ಪಟ್ಟಣಕ್ಕೆ ಔತಣಕೂಟಕ್ಕೆ ಬಸ್ ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿರುವ ಬೈಕ್ ತಪ್ಪಿಸಲು ಹೋಗಿ ಬಸ್ ನೇರವಾಗಿ ಗದ್ದೆಗೆ ಉರುಳಿ ಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ ಸುಮಾರು 8 ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ 55 ವರ್ಷದ ಗಂಗಮ್ಮ ಎಂಬವರ ಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿ ಒಟ್ಟು 35 ಮಂದಿಯಿದ್ದರು ಎಂಬುದಾಗಿ ತಿಳಿದುಬಂದಿದೆ.
ಅಪಘಾತ ಸ್ಥಳದಿಂದ ಕೊಂಚ ದೂರದಲ್ಲಿ ನೀರಿನ ಕಾಲುವೆಯಿದೆ. ಆದ್ರೆ ಅದೃಷ್ಟವಶಾತ್ ಹೆಚ್ಚಿನ ಅಪಾಯವಾಗಿಲ್ಲ. ಇದರಿಂದಾಗಿ ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ.