ಮಂಡ್ಯ, ನ 26(SM): ಶನಿವಾರ ರಾತ್ರಿ ವಿಧಿವಶರಾದ ಮಂಡ್ಯದ ಗಂಡು ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಲಕ್ಷಾಂತರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದ್ದಾರೆ.
ಈ ನಡುವೆಯೇ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಅವರು ರಮ್ಯಾಗೆ ರಾಜಕೀಯದ ದಾರಿ ತೋರಿಸಿದ್ದಾರೆ. ಆದ್ದರಿಂದ, ಮಂಡ್ಯಕ್ಕೆ ಬಂದು ರಮ್ಯಾ ಅವರು ಅಂತಿಮ ದರ್ಶನ ಪಡೆಯಬೇಕಿತ್ತು ಎಂಬುದು ಜನರ ಒತ್ತಾಯವಾಗಿತ್ತು. ಆದರೆ, ರಮ್ಯಾ ಅವರು ಮಂಡ್ಯಕ್ಕೆ ಬರಲೇ ಇಲ್ಲ. ಅಂಬರೀಶ್ ಅವರು ವಿಧಿವಶರಾದ ಸುದ್ದಿ ತಿಳಿದ ರಮ್ಯಾ ಅವರು ಟ್ವೀಟ್ ಮಾಡಿದ್ದರು. ಆದರೆ, ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಅಥವಾ ಮಂಡ್ಯಕ್ಕೆ ಆಗಮಿಸಲಿಲ್ಲ.
ರಮ್ಯಾ ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ಇಲ್ಲ. ರಮ್ಯಾ ಅವರು ಮಂಡ್ಯದ ಮಾಜಿ ಸಂಸದೆ. ಮಂಡ್ಯದ ಮಗಳಾಗಿ ಅವರು ಆಗಮಿಸಬೇಕಿತ್ತು. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಂಬರೀಶ್ ಅವರಿಗೆ ಮಂಡ್ಯದಲ್ಲಿಯೇ ಅವರು ಅಂತಿಮ ನಮನ ಸಲ್ಲಿಸಬೇಕಿತ್ತು ಎಂಬುವುದಾಗಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.