ಉಡುಪಿ, ನ26(SS): ಇಲ್ಲಿನ ಕಾಪು ಸಮೀಪದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ, ನಟ ಅಂಬರೀಶ್ ಸಾವಿನ ಮುಂಚೆ ನಾನು ಅವರಿಗೆ ಗಂಡಾತರವಿರುವ ಬಗ್ಗೆ ತಿಳಿಸಿದ್ದೆ, ಮಾತ್ರವಲ್ಲ ನಟ ಅಂಬರೀಶ್ ಅವರಿಗೆ ಮೃತ್ಯುಂಜಯ ಹೋಮ ನಡೆಸಲು ಸೂಚನೆ ನೀಡಿದ್ದೆ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ ಬುಕ್ ಪೋಸ್ಟ್:
ಇದಕ್ಕೇ ಹೇಳುವುದು ನಾವು ನಿಮಿತ್ತ ಮಾತ್ರ ಎಂದು. ಅಕ್ಟೋಬರ್ 10ರಂದು ಅಂಬರೀಶ್ ಅವರೊಡನೆ ಪ್ರಥಮ ಬಾರಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದೆ. ದೊಡ್ಡಣ್ಣ ಅವರ ಮೂಲಕ ಪರಿಚಯವಾಯಿತು. ಜಾತಕ ನೋಡಿ, ಲಗ್ನಾಷ್ಟಮದಲ್ಲಿ ಶನಿಸಂಚಾರ ಕಾಲ, ದಶಾಧಿಪತಿ ಬುಧನಿಗೆ ಚತುರ್ಥದಲ್ಲಿ ಕೇತು ಇರುವುದು ಅಪಾಯ ಎಂದು ತಿಳಿದು ಅವರಿಗೆ ಮೃತ್ಯುಂಜಯ ಹೋಮ ಮತ್ತು ಆಶ್ಲೇಷಬಲಿ ಮಾಡಲು ಸೂಚಿಸಿದ್ದೆ. ಆ ಪ್ರಕಾರ ದಿನಾಂಕ 12ರಂದು ನನ್ನ ಮೂಲಕವೇ ಮಾಡುವುದೆಂದೂ ದಿನ ನಿಗದಿಯೂ ಆಯಿತು. ಆದರೆ ಆ ದಿನ ಬೆಂಗಳೂರಲ್ಲಿ ನನಗೆ ಜ್ವರ ಬಂದು ಆರೋಗ್ಯವೂ ಕೈ ಕೊಟ್ಟಿತು. ಆದರೂ ಮಾಡೇ ಬಿಡೋಣ ಅಂತ ನನ್ನ ಜತೆ ಬಂದಿದ್ದ ಪುರೋಹಿತರು ಹೇಳಿಯೂ ಇದ್ದರು.
ಆದರೆ ಅಂಬರೀಶ್ ಅವರು ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯಕ್ರಿಯೆ ಇರುವುದರಿಂದ ಮುಂದಿನ ಸಲ ಮಾಡೋಣ ಎಂದು ಹೇಳಿದರು. ನಾನೂ ಇದೂ ಹೌದು ಎಂದು ಸುಮ್ಮನಾದೆ. ಈ ನಂತರ ಯಾವಾಗ ಮಾಡೋಣ ಎಂದು ಮತ್ತೆ ಕೇಳಿದ್ದರು. ನಾನು ಇನ್ನೂ ದಿನಾಂಕ ಕೊಡದೆ ಮುಂದೆ ಹಾಕಿದ್ದೆ.
ಈಗ ನಮ್ಮ ನೆಚ್ಚಿನ ಅಂಬರೀಶ್ ಇನ್ನಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು. ನಾನೇನೂ ಜೀವ ಉಳಿಸುವವನಲ್ಲ. ಆದರೆ ಭಕ್ತಿಶ್ರದ್ಧೆಯಿಂದ ಮಾಡುವ ಆ ಹೋಮ ಪೂಜೆಗಳಿಗೆ ಆ ಶಕ್ತಿ ಇತ್ತು. ಹಾಗಾಗಿ ಆಯುಷ್ಯ ಮುಗಿದಿದ್ದಾಗ ಪೂಜೆ ಮಾಡುವ ಯೋಗ ಬರಲಿಲ್ಲ. ಅಂತೂ ಸಜ್ಜನರೊಬ್ಬರನ್ನು ಕಳೆದುಕೊಂಡ ದುಃಖವು ನನಗಿದೆ. ಹಾಗಾಗಿ ಇದನ್ನು ಬರೆಯಬೇಕೆಂದೆನಿಸಿತು. ಸಜ್ಜನರನ್ನು ಉಳಿಸಿಕೊಳ್ಳುವ ಯೋಗಭಾಗ್ಯವು ನಮಗೂ ಬೇಕು. ಅದು ಇಲ್ಲದಂತಾಯಿತು. ಅವರ ದಿವ್ಯಾತ್ಮಕ್ಕೆ ಅಕ್ಷಯ ಪುಣ್ಯಲೋಕ ಸಿಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.