ಉಡುಪಿ, ನ26(SS): ಜಿಲ್ಲೆಯ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಡೆದ ನಾಗ ಪವಾಡ ಸಾಕಷ್ಟು ಸುದ್ದಿ ಮಾಡಿದ ಬೆನ್ನಲ್ಲೇ, ನಾಗಪಾತ್ರಿ ನಾಗರಾಜ್ ಭಟ್ ಮತ್ತೊಂದು ಪವಾಡ ಮಾಡಿ ಮಾಧ್ಯಮ ಸೇರಿದಂತೆ ಕರಾವಳಿಗರ ಅಚ್ಚರಿಗೆ ಕಾರಣವಾಗಿದ್ದಾರೆ. ಮಾತ್ರವಲ್ಲ, ಶಿವಮೊಗ್ಗದ ತೀರ್ಥಹಳ್ಳಿಯ ಖ್ಯಾತ ಆಧ್ಯಾತ್ಮಿಕ ಚಿಂತಕ ನಾಗರಾಜ್ ಭಟ್ ಅವರ ನುಡಿಗಳು ಮತ್ತೊಮ್ಮೆ ನಿಜವಾಗಿದೆ.
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಮುದ್ರಾಡಿ ಎಂಬಲ್ಲಿ ಮನೆಯ ಹಾಲ್ನ 6 ಅಡಿ ನೆಲದ ಕೆಳಗೆ ನಾಗನ ಪ್ರತಿಮೆ ಇದೆ ಎಂದು ಜೋತಿಷ್ಯ ನುಡಿದು, ಮನೆಯವರ ಮುಂದೆ ಅದನ್ನು ಹೊರ ತೆಗೆಸಿದ್ದರು. ನಾಗಪಾತ್ರಿ ಹೇಳಿದಂತೆ ಮನೆಯ ಹಾಲ್ನಲ್ಲೇ ನಾಗನ ಮೂರ್ತಿ ದೊರಕಿದ್ದು, ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಈ ಪವಾಡದ ಬಗ್ಗೆ ಕೆಲ ಜನ ಮೆಚ್ಚುಗೆ ವ್ಯಕ್ತ ಪಡಿಸಿದರೆ, ಇನ್ನೊಂದೆಡೆ ಕೆಲವರು ಇದೆಲ್ಲಾ ಸುಳ್ಳು ಎಂದು ಹೇಳಿದ್ದರು. ಮಾತ್ರವಲ್ಲ, ನಾಗಪಾತ್ರಿ ಮನೆವರ ದೃಷ್ಟಿ ಬೇರೆಡೆ ತಿರುಗಿಸಿ ತಾವೇ ನಾಗನ ಕಲ್ಲನ್ನು ಇಟ್ಟಿದ್ದರು ಎಂದು ಆರೋಪ ಮಾಡಿದ್ದರು. ಈ ಬಗ್ಗೆ ಅಪಸ್ವರ ಕೂಡ ಕೇಳಿ ಬಂದಿತ್ತು.
ಈ ಹಿನ್ನಲೆಯಲ್ಲಿ ಮಾಧ್ಯಮದವರಿಗೆ ನಾಗಪಾತ್ರಿ ನಾಗರಾಜ್ ಭಟ್ ಸವಾಲ್ ಹಾಕಿದ್ದರು. ಇನ್ನೊಂದು ಜಾಗದಲ್ಲಿ ನಾಗನ ಕಲ್ಲು ಇದೆ. ಶೀಘ್ರವೇ ಅದನ್ನು ಮೇಲಕ್ಕೆ ಎತ್ತುತ್ತೇನೆ. ಆ ಸಂದರ್ಭದಲ್ಲಿ ತಾವುಗಳೇ ನೇರವಾಗಿ ಚಿತ್ರೀಕರಿಸಿ ಎಂದು ಹೇಳಿದ್ದರು.
ನಾಗಪಾತ್ರಿ ನಾಗರಾಜ್ ಭಟ್ ನುಡಿದಂತೆ ಮಾಧ್ಯಮ ಹಾಗೂ ನೂರಾರು ಜನರ ಸಮ್ಮುಖದಲ್ಲೇ ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೊಪ್ಪ ಗ್ರಾಮಪಂಚಾಯ್ತಿಯ ಮರಗಳಲೆ ಗ್ರಾಮದ ವೆಂಕಟಪ್ಪ ಪೂಜಾರಿಯವರ ಮಗ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗ ಬನದಲ್ಲಿ ತ್ರಿಶೂಲ ಮತ್ತು ನಾಗನ ಕಲ್ಲು ಹೊರ ತೆಗೆದಿದ್ದಾರೆ. ಈ ಪವಾಡ ಜನರಲ್ಲಿ ಆಶ್ಚರ್ಯ ಮೂಡಿಸಿದೆ.