ಮುಂಬೈ, ನ 26(SM): ಭಾರತ ಕಂಡಂತಹ ಅತ್ಯಂತ ಘೋರ ಘಟನೆಯಾದ ಮುಂಬೈ ಮೇಲಿನ ಉಗ್ರ ದಾಳಿ ನಡೆದು ಇಂದಿಗೆ 1 ದಶಕವಾಗಿದೆ. ಘಟನೆ ನಡೆದು 10 ವರ್ಷ ಕಳೆದರೂ ಆ ಕರಾಳ ದಿನದ ನೆನಪು ದೇಶದ ಇತಿಹಾಸದಲ್ಲಿ ಹಾಗೆ ಉಳಿದುಕೊಂಡಿದೆ.
26/11 2008ರಂದು ಪಾಕಿಸ್ತಾನದ ಉಗ್ರರು ಇಂತಹ ಕೃತ್ಯ ಎಸಗಿದ್ದರು. ಸಮುದ್ರ ಮುಖಾಂತರ ಮೀನುಗಾರರನ್ನು ಕೊಂದು ವಾಣಿಜ್ಯ ನಗರವಾದ ಮುಂಬೈ ಪ್ರವೇಶಿಸಿದ್ದರು. ಅಲ್ಲದೆ 7 ಕಡೆ ದಾಳಿ ನಡೆಸಿ, 166 ಜನರನ್ನು ಬಲಿ ತೆಗೆದುಕೊಂಡಿದ್ದರು. ನವಂಬರ್ 26ರಂದು ಮುಂಬೈನ ಪ್ರಸಿದ್ಧ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ,ಒಬೆರಾಯ್ ಟ್ರೈಡೆಂಟ್,ಸೆಂಟ್ ಕ್ಸೇವಿಯರ್ ಕಾಲೇಜು, ಕಾಮಾ ಆಸ್ಪತ್ರೆ ಸೇರಿದಂತೆ 7 ಕಡೆಗಳಲ್ಲಿ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದರು. ಈ ದಾಳಿಯಲ್ಲಿ ಸುಮಾರು 166 ಮಂದಿ ಮೃತಪಟ್ಟು, 300 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಲ್ಲದೆ 17 ಜನ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.
ಇನ್ನು ದಾಳಿ ನಡೆಸಿದ 10 ಉಗ್ರರಲ್ಲಿ 9 ದಾಳಿಕೋರರನ್ನು ಭದ್ರತಾ ಸಿಬ್ಬಂದಿಗಳು ಕೊದು ಹಾಕಿದ್ದರು. ಜೀವಂತ ಸೆರೆ ಹಿಡಿದಿದ್ದ ಅಜ್ಮಲ್ ಕಸಬ್ನನ್ನು ಭಾರತ ಗಲ್ಲಿಗೇರಿಸಿದೆ. ದಾಳಿ ನಡೆದು ಹತ್ತು ವರ್ಷಗಳಾಗಿದೆ, ಆದರೆ ಪಾಕಿಸ್ತಾನ ಮಾತ್ರ ಸಂಚುಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದಾಳಿಯ ಪ್ರಮುಖ ಸಂಚುಕೋರ ಎನ್ನಲಾದ, ಲಷ್ಕರ್ ಎ ತೋಯ್ಬಾದ ಮುಖ್ಯಸ್ಥ–ಉಗ್ರ ಹಫೀಜ್ ಪಾಕಿಸ್ತಾನದಲ್ಲಿ ಬಂಧಮುಕ್ತವಾಗಿ ಸಂಚರಿಸುತ್ತಿದ್ದರೂ, ಪಾಕ್ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.