ಹೊಸದಿಲ್ಲಿ, ನ26(SS): ಇಂಧನ ದರ ಇಳಿಕೆಯಾಗುತ್ತಿರುವುದರಿಂದ ಗ್ರಾಹಕರು ನಿರಾಳಗೊಂಡಿದ್ದು, ಕೇವಲ ನವೆಂಬರ್ ತಿಂಗಳಲ್ಲಿ ಪೆಟ್ರೋಲ್ ದರ 5 ರೂ., ಡೀಸೆಲ್ ದರ 4.30 ರೂ. ಇಳಿಕೆಯಾಗಿದೆ.
ಪೆಟ್ರೋಲ್ ದರ ಭಾನುವಾರದಂದು ಪ್ರತೀ ಲೀಟರ್ಗೆ 40 ಪೈಸೆ ಇಳಿಕೆಯಾಗಿತ್ತು. ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ರೂ.74.84ಕ್ಕೆ ಕುಸಿದಿತ್ತು. ಇತ್ತ ಡೀಸೆಲ್ ದರ 45 ಪೈಸೆ ಕಡಿಮೆಯಾಗಿದ್ದು, ದಿಲ್ಲಿಯಲ್ಲಿ 70ರ ಮಟ್ಟಕ್ಕಿಂತ ಕೆಳಗಿಳಿದಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ.75.43, ಡೀಸೆಲ್ ದರ ರೂ.70.07ಕ್ಕೆ ಇಳಿಕೆಯಾಗಿದೆ. ಸದ್ಯದ ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ, ಇಂಧನ ದರ ಇನ್ನಷ್ಟು ದಿನ ಇಳಿಕೆಯ ಹಾದಿಯಲ್ಲೇ ಇರಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕುಸಿಯುತ್ತಿದ್ದು, ಬ್ಯಾರೆಲ್ಗೆ 3.34 ಡಾಲರ್ ಅಥವಾ ಶೇ.5.3 ಕಡಿಮೆಯಾಗಿದ್ದು 59.25 ಡಾಲರ್ಗೆ ಇಳಿಕೆಯಾಗಿದೆ. 2017ರ ಅಕ್ಟೋಬರ್ನಿಂದ ಈ ತನಕದ ಕನಿಷ್ಠ ಮಟ್ಟ ಇದಾಗಿದೆ.
ಇಂಧನ ದರ ಇಳಿಕೆಯಾಗುತ್ತಿರುವುದರಿಂದ ದೇಶದ ಆರ್ಥಿಕತೆ ವೃದ್ಧಿಗೆ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಸದ್ಯದ ಪರಿಸ್ಥಿತಿ ಅನುಕೂಲಕರವಾಗಿದೆ.