ಮಂಗಳೂರು, ನ. 02 (DaijiworldNews/HR): ಅನೇಕ ಮಂದಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು, ತಮ್ಮ ಇಡೀ ದಿನವನ್ನೇ ಅದರೊಂದಿಗೆ ಕಳೆದು ಪ್ರಾಣಿಗಳಿಗೆ ವಿಶೇಷ ಪ್ರೀತಿಯನ್ನು ನೀಡುತ್ತಾರೆ. ಅದೇ ರೀತಿ ಉಜಿರೆಯ ಪ್ರಾಣಿ ಪ್ರಿಯೆ ಶ್ರುತಿ ಜೈನ್ ಅವರು ಕೂಡ ತಮ್ಮ ನಾಯಿ 'ಝಿಪ್ಪಿ' ಮೇಲಿನ ಪ್ರೀತಿಯನ್ನು' ಪ್ರೀತಿಗೊಂದು ಹೆಸರು ಇದು ಝಿಪ್ಪಿ ಗ್ರಫಿ' ಎಂಬ ಪುಸ್ತಕದ ಮೂಲಕ ಅರ್ಪಿಸಿದ್ದಾರೆ.
ಶ್ರುತಿ ಜೈನ್ ಅವರು ಝಿಪ್ಪಿನೊಂದಿಗಿನ ಅನುಭವವನ್ನು ಮತ್ತು ಝಿಪ್ಪಿಯ ಜೀವನದ ಬಗ್ಗೆ ಪದಗಳಲ್ಲಿ ಬರೆದಿದ್ದಾರೆ. ಆರು ವರ್ಷಗಳ ಹಿಂದೆ 30 ದಿನದ ಪುಟ್ಟ ನಾಯಿ ಮರಿಯನ್ನು ಮಂಗಳೂರಿನಿಂದ ದತ್ತು ಪಡೆದು ತಂದಿದ್ದು, ಅಂದಿನಿಂದ ಶ್ರುತಿ ಮತ್ತು ಝಿಪ್ಪಿ ನಡುವಿನ ಬಾಂಧವ್ಯವು ಗಟ್ಟಿಯಾಗಿ ಝಿಪ್ಪಿ ಜೀವನದ ಕುರಿತು 'ಝಿಪ್ಪಿ ಗ್ರಫಿ' ಎಂಬ ಶೀರ್ಷಿಕೆಯ ಪುಸ್ತಕವನ್ನು ಬರೆಯಲು ಪ್ರೇರಣೆಯಾಗಿದೆ.
ಶ್ರುತಿ ಜೈನ್ ಕಾರ್ಕಳ ಮೂಲದವರಾಗಿದ್ದು, ಪ್ರಸ್ತುತ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರುತಿ ಆ್ಯಂಕರ್, ಮಾಡೆಲ್ ಮತ್ತು ಡ್ಯಾನ್ಸರ್ ಕೂಡ ಹೌದು.
ಈ ಕುರಿತು ದೈಜಿವಲ್ಡ್ ಜೊತೆ ಮಾತನಾಡಿದ ಶೃತಿ ಜೈನ್, 'ನಾನು ಆರು ವರ್ಷಗಳಲ್ಲಿ ಝಿಪ್ಪಿ ಜೊತೆ ಹಂಚಿಕೊಂಡ ಅನುಭವ ಮತ್ತು ಬಾಂಧವ್ಯದ ಬಗ್ಗೆ ಪದಗಳಲ್ಲಿ ಹೇಳಿದ್ದೇನೆ. ಕೇವಲ 30 ದಿನಗಳಿರುವಾಗ ನಾನು ಅವಳನ್ನು ಮಂಗಳೂರಿನಿಂದ ದತ್ತು ತೆಗೆದುಕೊಂಡೆ, ಆರಂಭದಿಂದಲೂ ನಮ್ಮಿರದ್ದು ವಿಶೇಷ ಬಾಂಧವ್ಯ. ಝಿಪ್ಪಿ ತರಬೇತಿ ಪಡೆದ ನಾಯಿಯಲ್ಲ ಆದರೆ ಅವಳಿಗೆ ನನ್ನ ಎಲ್ಲಾ ಮಾತುಗಳು ಅರ್ಥವಾಗುತ್ತದೆ ಅದರಂತೆ ನಡೆದುಕೊಳ್ಳುತ್ತಾಳೆ.
ಇನ್ನು ನಮ್ಮ ಬಾಂಧವ್ಯದ ಬಗ್ಗೆ ತಮಾಷೆಯಾಗಿ ಪುಸ್ತಕ ಬರೆದಿದ್ದೇನೆ. ಸಾಕುಪ್ರಾಣಿ ಪ್ರಿಯರು ಖಂಡಿತವಾಗಿಯೂ ಪುಸ್ತಕವನ್ನು ಇಷ್ಟಪಡುತ್ತಾರೆ. ಜೊತೆಗೆ ಈ ಪುಸ್ತಕವನ್ನು ಓದುವಾಗ ನಿಮ್ಮದೇ ನಾಯಿಯ ಬಗ್ಗೆ ನೀವು ಓದುತ್ತಿದ್ದೀರಿ ಎಂದು ಅನಿಸುತ್ತದೆ ಎಂದರು.
ಈ ಪುಸ್ತಕವನ್ನು ಓದುವುದರಿಂದ ನಿಮಗೂ ನಾಯಿಯನ್ನು ದತ್ತು ತೆಗೆದುಕೊಳ್ಳಬೇಕೆಂದು ಪ್ರೇರಣೆ ನೀಡುತ್ತದೆ. ಝಿಪ್ಪಿನ ತುಂಟತನ, ಕೋಪ, ಮುದ್ದುತನವನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಪುಸ್ತಕವು ಕಾಲ್ಪನಿಕ ಕಥೆಯಲ್ಲ, ಬದಲಾಗಿ ಝಿಪ್ಪಿ ಕುರಿತಾಗಿ ಕಥೆ ಎಂದು ಶ್ರುತಿ ಜೈನ್ ಹೇಳುತ್ತಾರೆ.
ಇನ್ನು ನಾಯಿಯ ಕುರಿತಾದ ಲೈವ್ ಸ್ಟೋರಿ ಹೊಂದಿರುವ ಈ ಪುಸ್ತಕ ರಾಜ್ಯದ ಮೊದಲ ಪುಸ್ತಕವಾಗಿದೆ. ಝಿಪ್ಪಿ ಗ್ರಾಫಿ 15 ಕಥೆಗಳ 80 ಪುಟಗಳನ್ನು ಒಳಗೊಂಡಿದೆ, ಜೇಮ್ಸ್ ವಾಜ್ ಕವರ್ ಪೇಜ್ ವಿನ್ಯಾಸ ಮಾಡಿದ್ದಾರೆ, ರಾಘವೇಂದ್ರ ಶೃಂಗೇರಿ ಅವರು ಕಲಾಕೃತಿಯೊಂದಿಗೆ ಚಿತ್ರಣವನ್ನು ಮಾಡಿದ್ದಾರೆ. ಕಲಾಕೃತಿ ಪುಸ್ತಕವು ಮುಂದಿನ ಕಥೆಯನ್ನು ತಿಳಿದುಕೊಳ್ಳುವ ಕುತೂಹಲವನ್ನು ಉಂಟುಮಾಡುತ್ತದೆ, ನಟ ರಾಜ್ ಬಿ ಶೆಟ್ಟಿ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
'ಏಳು ತಿಂಗಳ ಹಿಂದೆ ಲಾಕ್ಡೌನ್ ಸಮಯದಲ್ಲಿ ನಾನು ಪುಸ್ತಕವನ್ನು ಬರೆಯಲು ಪ್ರಾರಂಭಿಸಿದೆ. ನಾನು ಝಿಪ್ಪಿಯ ಕುರಿತಾಗಿ ಪುಸ್ತಕ ಬರೆಯುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಆದರೆ ನಾನು ಝಿಪ್ಪಿನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ, ಅನೇಕರು ನಮ್ಮ ಬಾಂಧವ್ಯದ ಬಗ್ಗೆ ಪದಗಳಲ್ಲಿ ಹೇಳಲು ಸಲಹೆ ನೀಡಿದ್ದರು ಎಂದರು.
ಇನ್ನು ನಾವಿಬ್ಬರೂ ಟ್ರಾವೆಲ್ ಫ್ರೀಕ್ ಆಗಿ ಅನೇಕ ಸ್ಥಳಗಳಿಗೆ ಪ್ರಯಾಣಿಸಿದ್ದೇವೆ. ನಾವು ಪ್ರಯಾಣಿಸುವಾಗ ಕಾರಿನ ಕಿಟಕಿಯನ್ನು ಮಾತ್ರ ಹಾಕಬಾರದೆಂಬ ಎಂಬ ಏಕೈಕ ಷರತ್ತು ಝಿಪ್ಪಿಯದಾಗಿತ್ತು.
ಪ್ರತಿಯೊಬ್ಬರೂ ನಾಯಿಯನ್ನು ಪ್ರೀತಿಸಬೇಕು ಎಂಬುದಕ್ಕಾಗಿ ಈ ಪುಸ್ತಕವನ್ನು ಬರೆದಿದ್ದೇನೆ. ಝಿಪ್ಪಿ ನನಗೆ ಒಬ್ಬ ಸ್ನೇಹಿತೆ, ಮಾರ್ಗದರ್ಶಕ, ಮತ್ತು ನನಗೆ ಸ್ಫೂರ್ತಿ.
ಶೃತಿ ಜೈನ್ ಡಿಸೆಂಬರ್ ತಿಂಗಳಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.