ಮಂಗಳೂರು, ನ26(SS): ದೇಶದಲ್ಲಿ ಶ್ರೀರಾಮನನ್ನು ಆರಾಧಿಸುವ ಕೋಟಿ ಕೋಟಿ ಜನರಿದ್ದಾರೆ. ದೇಶದಲ್ಲಿ ಅಚ್ಛೇ ದಿನ್ ಬರುವುದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆದಾಗ ಮಾತ್ರ ಎಂದು ಬಜರಂಗದಳದ ರಾಷ್ಟ್ರೀಯ ಸಂಯೋಜಕ ಸೋಹನ್ ಸಿಂಗ್ ಸೋಲಂಕಿ ಹೇಳಿದ್ದಾರೆ.
ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಅವರು, ಓರ್ವ ಮತಾಂಧ, ದೇವಸ್ಥಾನಗಳನ್ನು ಲೂಟಿ ಮಾಡಿದ ಟಿಪ್ಪು ಜಯಂತಿಯನ್ನು ಈ ದೇಶದಲ್ಲಿ ಆಚರಣೆ ಮಾಡುತ್ತೀರಿ. ಈ ದೇಶ ಬಾಬರ್, ಅಕ್ಬರ್, ಟಿಪ್ಪುಗೆ ಸೇರಿದ್ದಲ್ಲ. ಬಾಬರ್ ವಂಶಸ್ಥರು ಈ ದೇಶದಲ್ಲಿ ಇಲ್ಲ. ಜಯಂತಿ ಬೇಕಿದ್ದರೆ ಹರಿಹರ ಬುಕ್ಕ, ಕೃಷ್ಣದೇವರಾಯನ ಜಯಂತಿ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತ ದೇಶದಲ್ಲಿ ಶ್ರೀರಾಮನನ್ನು ಆರಾಧಿಸಲು ಕೋಟಿ ಕೋಟಿ ಜನರಿದ್ದಾರೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬಳಿ ಸಮಯ ಇಲ್ಲ. ಆದರೆ ಶಬರಿಮಲೆ, ಕರುಣಾನಿಧಿ ಅಂತ್ಯಕ್ರಿಯೆ ಸ್ಥಳದ ವಿವಾದ, ದೀಪಾವಳಿ ಪಟಾಕಿ ನಿಷೇಧ ಮಾಡಲು ಕೋರ್ಟ್ ಬಳಿ ಬೇಕಾದಷ್ಟು ಸಮಯ ಇದೆ. ಲೋಕಸಭೆಯ ಚಳಿಗಾಲ ಅಧಿವೇಶನದಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ನಿರ್ಣಯ ಕೈಗೊಳ್ಳಬೇಕು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾದರೆ ಮಾತ್ರ ಅಚ್ಛೇ ದಿನ್ ಬರುತ್ತದೆ ಎಂದು ಹೇಳಿದ್ದಾರೆ.